ರಾಜ್ಯ ಬಿಜೆಪಿ ಸರ್ಕಾರಕ್ಕೆ ಗ್ರಾಮಾಂತರ ಪ್ರದೇಶದಲ್ಲಿ ಮತ ಕೇಳುವ ನೈತಿಕ ಹಕ್ಕು ಇಲ್ಲ ಎಂದು ವಿರೋಧ ಪಕ್ಷದ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಗರದಲ್ಲಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ರೈತರಿಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ರೈತರಿಗೆ ಮೋಸ ಮಾಡಿದೆ. ಬಳಿಕ ಈಶ್ವರಪ್ಪನವರು ನಿರಂತರ ಜ್ಯೋತಿ ಎಂದು ಸುಳ್ಳಿ ಹೇಳಿದರು. ಈ ಮೂಲಕ ರೈತರಿಗೆ ವಂಚಿಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಮತ ಕೇಳುವ ಅಧಿಕಾರವಿಲ್ಲ ಎಂದರು.
ಅಲ್ಲದೆ, ಮಾಜಿ ಇಂಧನ ಸಚಿವ ರೇವಣ್ಣ ಮತ್ತು ಯಡಿಯೂರಪ್ಪನವರು ಕಲ್ಲಿದ್ದಲ್ಲು ಪ್ರಕರಣದ ಕುರಿತು ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡುವ ಮೂಲಕ ಜನರನ್ನು ಕತ್ತಲಲ್ಲಿ ಕೂರಿಸಿದ್ದಾರೆ ಎಂದು ದೂರಿದರು.
ಈ ನಡುವೆ, ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಬಹುತೇಕ ಮಂದಿ ಬಿಜೆಪಿ ಅಭ್ಯರ್ಥಿಗಳು ದೊರೆಯದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಹಣದ ಅಮಿಷವೊಡ್ಡಿ ಕಣಕ್ಕೆ ನಿಲ್ಲಿಸುತ್ತಿದ್ದಾರೆ ಎಂದು ದೂರಿದ ಅವರು, ಇಂತಹ ದ್ರೋಹವೆಸಗುವ ಬಿಜೆಪಿಗೆ ಮತದಾರರು ತಕ್ಕ ಬುದ್ದಿ ಕಲಿಸಬೇಕೆಂದು ಕರೆ ನೀಡಿದರು.