ನಟಿ ರಂಜಿತಾಳದೊಂದಿಗಿನ ರಾಸಲೀಲೆ ಪ್ರಕರಣದಲ್ಲಿ ಬಂಧಿಯಾಗಿರುವ ಕಾಮಿ ನಿತ್ಯಾನಂದ ಸ್ವಾಮಿಗೆ ಸೋಮವಾರ ರಾತ್ರಿ ದಿಢೀರನೆ ಎದೆನೋವು ಕಾಣಿಸಿಕೊಂಡಿದ್ದರಿಂದ ಆತನನ್ನು ನಗರದ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಜತೆಗೆ ನಿತ್ಯಾನಂದನ ಶಿಷ್ಯ ನಿತ್ಯಾಭಕ್ತಾನಂದ ಅಲಿಯಾಸ್ ಗೋಪಾಲ ಸೀಲಂ ರೆಡ್ಡಿಯನ್ನು ನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ರಾಸಲೀಲೆ ಪ್ರಕರಣದಲ್ಲಿ ಹಿಮಾಚಲ ಪ್ರದೇಶದಿಂದ ರಾಜ್ಯ ಸಿಐಡಿ ಪೊಲೀಸರು ಬಂಧಿಸಿ ನಗರಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನನ್ನು ನಾಲ್ಕು ದಿನಗಳ ಕಾಲ ಸಿಐಡಿ ವಶಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿತ್ತು. ಸೋಮವಾರ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೆ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ಕಸ್ಟಡಿಯ ಅವಧಿಯನ್ನು ವಿಸ್ತರಿಸಲಾಗಿತ್ತು.
ನಂತರ ರಾಮನಗರದಿಂದ ಬೆಂಗಳೂರಿಗೆ ಕರೆ ತರುತ್ತಿದ್ದ ವೇಳೆ ಆತನಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಆತನನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ನಿತ್ಯಾನಂದ ಸ್ವಾಮಿಗೆ ಇಸಿಜಿ ಹಾಗೂ ಎಕೊ ಕಾರ್ಡಿಯೋಗ್ರಾಫ್ ಪರೀಕ್ಷೆ ಮಾಡಲಾಗಿದೆ. ಆತನ ದೇಹ ಸ್ಥಿತಿಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ವೈದ್ಯಕೀಯ ಮೂಲಗಳು ಹೇಳಿವೆ. ಇದೀಗ ಆತನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ವಿವರಿಸಿದ್ದಾರೆ.
ನಿದ್ದೆ, ಧ್ಯಾನದ ನಾಟಕ ಮುಗಿಯಿತು: ಮೊದಲ ನಾಲ್ಕು ದಿನಗಳ ವಿಚಾರಣೆ ಸಂದರ್ಭದಲ್ಲಿ ಎರಡು ದಿನ ನಿದ್ದೆ, ಧ್ಯಾನದ ನಾಟಕವಾಡುವ ಮೂಲಕ ಸ್ವಾಮಿ ಸಿಐಡಿ ಅಧಿಕಾರಿಗಳ ವಿಚಾರಣೆಗೆ ಸಹಕರಿಸದೆ ರಗಳೆ ಕೊಟ್ಟಿದ್ದ. ಆದರೂ ವಿಚಾರಣೆ ವೇಳೆ ಕೆಲವು ಮಾಹಿತಿ ನೀಡಿದ್ದ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದರು.
ಅಂತೂ ನಿನ್ನೆಗೆ ಕಸ್ಟಡಿ ಅವಧಿ ಮುಗಿದಿದ್ದರಿಂದ ಹೆಚ್ಚಿನ ವಿಚಾರಣೆಗೆ ಅವಕಾಶವಾಗುವ ನಿಟ್ಟಿನಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಕಸ್ಟಡಿ ಅವಧಿ ವಿಸ್ತರಿಸುವಂತೆ ಸಿಐಡಿ ಅಧಿಕಾರಿಗಳು ರಾಮನಗರ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದರು. ಆ ನೆಲೆಯಲ್ಲಿ ಸ್ವಾಮಿಯನ್ನು ಎರಡು ವಿಚಾರಣೆಯನ್ನು ಮತ್ತೆರಡು ದಿನಕ್ಕೆ ವಿಸ್ತರಿಸಿದ್ದರು.
ನಂತರ ಸ್ವಾಮಿಗೆ ದಿಢೀರನೆ ಎದೆನೋವು ಕಾಣಿಸಿಕೊಂಡಿದ್ದರಿಂದ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಒಂದು ದಿನ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ. ಹಾಗಾಗಿ ಉಳಿದ ಒಂದು ದಿನ ವಿಚಾರಣೆಯಲ್ಲಿ ಮತ್ತೊಂದು ನಾಟಕವಾಡಿ, ಹೇಗೋ ತಪ್ಪಿಸಿಕೊಳ್ಳುವ ಹುನ್ನಾರ ಸ್ವಾಮಿಯದ್ದು!