ಬಂಧಿತ ಕಾಮಿಸ್ವಾಮಿ ನಿತ್ಯಾನಂದನಿಗೆ ಸೋಮವಾರ ರಾತ್ರಿ ದಿಢೀರನೆ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಆತನಿಗೆ ಯಾವುದೇ ರೀತಿಯ ಎದೆನೋವು ಇಲ್ಲ, ತಪಾಸಣೆಯ ವರದಿಯಲ್ಲಿಯೂ ಕಾಯಿಲೆಯ ಲಕ್ಷಣ ಕಂಡು ಬಂದಿಲ್ಲ ಎಂದು ಆತನನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ.ಸಿ.ಎನ್.ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.
ನಿತ್ಯಾನಂದನನ್ನು ಎಲ್ಲಾ ರೀತಿಯ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಆದರೆ ಆತನಿಗೆ ಯಾವುದೇ ರೀತಿಯ ಹೃದಯ ಸಂಬಂಧಿ ಕಾಯಿಲೆ ಇಲ್ಲ. ತಪಾಸಣೆಯ ವರದಿಯಲ್ಲಿ ರೋಗ ಲಕ್ಷಣ ಕಂಡು ಬಂದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದು, ಆ ನಿಟ್ಟಿನಲ್ಲಿ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್‌ಗೊಂಡ ಸ್ವಾಮಿಯನ್ನು ವಿಚಾರಣೆಗಾಗಿ ಸಿಐಡಿ ಕಚೇರಿಗೆ ಕರೆ ತಂದಿದ್ದಾರೆ.
ನಿತ್ಯಾನಂದ ಸ್ವಾಮಿಗೆ ಸೋಮವಾರ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದರಿಂದ ಆತನನ್ನು ನಗರದ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರಾಸಲೀಲೆ ಪ್ರಕರಣದಲ್ಲಿ ಹಿಮಾಚಲ ಪ್ರದೇಶದಿಂದ ರಾಜ್ಯ ಸಿಐಡಿ ಪೊಲೀಸರು ಬಂಧಿಸಿ ನಗರಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನನ್ನು ನಾಲ್ಕು ದಿನಗಳ ಕಾಲ ಸಿಐಡಿ ವಶಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿತ್ತು. ಸೋಮವಾರ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೆ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ಕಸ್ಟಡಿಯ ಅವಧಿಯನ್ನು ವಿಸ್ತರಿಸಲಾಗಿತ್ತು.
ನಂತರ ರಾಮನಗರದಿಂದ ಬೆಂಗಳೂರಿಗೆ ಕರೆ ತರುತ್ತಿದ್ದ ವೇಳೆ ಆತನಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮುಂದುವರಿದ ನಿತ್ಯಾನಂದನ ನಾಟಕ: ನಿತ್ಯಾನಂದ ಕೇವಲ ರಾಸಲೀಲೆಯಲ್ಲಿ ಮಾತ್ರವಲ್ಲ, ಕಪಟ ನಾಟಕದಲ್ಲಿಯೂ ನಿಪುಣ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾನೆ. ಸಿಐಡಿ ಪೊಲೀಸರ ವಶದಲ್ಲಿ ನಾಲ್ಕು ದಿನಗಳ ಕಾಲ ಇದ್ದಾಗಲೂ ಕೂಡ ಮೊದಲ ಎರಡು ದಿನ ನಿದ್ದೆ, ಧ್ಯಾನದ ನಾಟಕ ಮಾಡಿ ವಿಚಾರಣೆಯಿಂದ ನುಣುಚಿಕೊಳ್ಳುವ ಯತ್ನ ಮಾಡಿದ್ದ. ಅಂತೂ ಇದೀಗ ಕೋರ್ಟ್ ಮತ್ತೆರಡು ದಿನ ಕಸ್ಟಡಿ ವಿಸ್ತರಿಸಿದ್ದನ್ನು ಗಮನಿಸಿದ ನಿತ್ಯಾನಂದ ಎದೆನೋವಿನ ನಾಟಕವಾಡಿ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ತಪಾಸಣೆ ನಡೆಸಿದ ವೈದ್ಯರು ಆತನಿಗೆ ಯಾವುದೇ ತೊಂದರೆಯಿಲ್ಲ ಎಂದು ಹೇಳುವ ಮೂಲಕ ನಿತ್ಯಾನಂದನ ನಾಟಕ ಮತ್ತೆ ಬಯಲಾಗಿದೆ.
ಲೆನಿನ್ ಕರುಪ್ಪನ್ ವಿಚಾರಣೆ: ನಿತ್ಯಾನಂದನ ಕಾರು ಚಾಲಕನಾಗಿದ್ದ ಲೆನಿನ್ ಕರುಪ್ಪನನ್ನು ಇಂದು ಸಿಐಡಿ ಕಚೇರಿಯಲ್ಲಿ ವಿಚಾರಣೆಗೊಳಪಡಿಸುತ್ತಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.