ರಾಜ್ಯದ ಪೊಲೀಸ್ ಇಲಾಖೆಯ ಬಲವರ್ಧನೆಯ ಹಿನ್ನೆಲೆಯಲ್ಲಿ ಆಂತರಿಕ ಭದ್ರತೆಗೆ ವಿಶೇಷ ನಿಗಾವಹಿಸಬೇಕೆಂದು ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ಹಂಸ್ರಾಜ್ ಭರಧ್ವಾಜ್ ಅವರು ಸಲಹೆ ನೀಡಿದ್ದಾರೆ.
ರಾಜಭವನದಲ್ಲಿ ಸೋಮವಾರ ಆಯೋಜಿಸಿದ್ದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ರಾಷ್ಟ್ರಪತಿ ಪದಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡಲು ಹೊಸ ತಂತ್ರಜ್ಞಾನ ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಲ್ಲದೆ, ಆಡಳಿತ ಸುಧಾರಣೆಗಾಗಿ ಕಮಾಂಡೋ ಪಡೆ ಸ್ಥಾಪನೆಗೆ ವಿಶೇಷ ನಿಧಿ ಮೀಸಲಿರಿಸಬೇಕೆಂದು ಸಲಹೆ ನೀಡಿದ ಅವರು, ತನಿಖೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಪ್ರತ್ಯೇಕ ವ್ಯವಸ್ಥೆಯಾಗಬೇಕು. ಅದು ಶೀಘ್ರ ಜಾರಿಯಾದಲ್ಲಿ ಕಾರ್ಯಭಾರದ ಒತ್ತಡ ಕಡಿಮೆಯಾಗಲಿದೆ ಎಂದರು.
ಇದೇ ವೇಳೆ ಪೊಲೀಸರ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ಪೊಲೀಸರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಹೊಣೆಗಾರಿಕೆಯನ್ನರಿತು ಕೆಲಸ ನಿರ್ವಹಿಸುತ್ತಿದ್ದಾರೆ. ಎಲ್ಲಾ ಇಲಾಖೆಗಳಿಗಿಂತ ಅತಿ ಕಡಿಮೆ ಸಂಬಳದಲ್ಲಿ ಅತಿ ಹೆಚ್ಚು ಕಾರ್ಯ ನಿರ್ವಹಿಸುವ ಇಲಾಖೆ ಪೊಲೀಸ್ ಇಲಾಖೆಯಾಗಿದೆ ಎಂದರು.