ಶ್ರೀಮಂತ ಸಾಹಿತ್ಯ ಪರಂಪರೆ ಹೊಂದಿರುವ ಉರ್ದು ಭಾಷೆ ಇಂದು ರಾಜಕಾರಣಿಗಳ ಹಾಗೂ ಮೂಲಭೂತವಾದಿಗಳ ಕೈಗೆ ಸಿಕ್ಕಿ ಸೊರಗುತ್ತಿದೆ ಎಂದು ಖ್ಯಾತ ಕವಿ, ರಾಜ್ಯಸಭಾ ಸದಸ್ಯ ಜಾವೇದ್ ಅಖ್ತರ್ ವಿಷಾದ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉರ್ದು ಒಂದು ಪ್ರದೇಶದ ಭಾಷೆಯಾಗಿತ್ತೇ ವಿನಃ ಅದು ಯಾವುದೇ ಜಾತಿ ಪಂಗಡಕ್ಕೆ ಸೇರಿದುದಲ್ಲ. ಆದರೆ ಇದನ್ನು ಮುಸ್ಲಿಮರ ಭಾಷೆಯೆಂದು ಪರಿಗಣಿಸಿರುವುದು ಒಂದು ವ್ಯವಸ್ಥಿತ ಕುತಂತ್ರ ಎಂದು ಆರೋಪಿಸಿದರು.
ಉರ್ದು ಕವಿಗಳು, ಸೂಫಿ ಸಂತರ ಕಾವ್ಯದಲ್ಲಿ, ಮಾತಿನಲ್ಲಿ ಎಲ್ಲೂ ಧರ್ಮ ರಾಜಕಾರಣದ ಸುಳಿವು ಕೂಡ ಕಾಣಿಸುವುದಿಲ್ಲ. ಉರ್ದು ಕವಿಗಳು ಎಂದೂ ಮೂಲಭೂತವಾದಿ ಸಿದ್ದಾಂತ ಪ್ರತಿಪಾದಕರಾಗಿರಲಿಲ್ಲ ಎಂದು ವಿಶ್ಲೇಷಿದ ಜಾವೇದ್, ಇದು 2-3 ಶತಮಾನಗಳ ಹಿಂದೆಯೇ ಕೃಷ್ಣ, ರಾಮ ಸೇರಿದಂತೆ ಹಿಂದೂ ಹಬ್ಬದ ಕುರಿತು ಉರ್ದು ಭಾಷೆಯಲ್ಲಿ ಹಲವು ಪ್ರಸಿದ್ಧ ಕವಿತೆಗಳು ಸೃಷ್ಟಿಯಾಗಿವೆ. ಅಂದ ಮೇಲೆ ಇದು ಮುಸ್ಲಿಮರ ಭಾಷೆಯೆಂದು ಬಿಂಬಿಸುವುದು ಸರಿಯೇ ಎಂದು ಪ್ರಶ್ನಿಸಿದರು.
ಇದರ ಹಿಂದೆ ವ್ಯವಸ್ಥಿತ ಹುನ್ನಾರ ಅಡಗಿದೆ. ಇದು ಮೊದಲನೇ ಸ್ವಾತಂತ್ರ್ಯ ಸಂಗ್ರಾಮದ ಕಾಲದಿಂದಲೂ ಈ ಹುನ್ನಾರ ಆರಂಭವಾಗಿದೆ. ಇದರಿಂದಾಗಿಯೇ ಉತ್ತರ ಭಾರತದಲ್ಲಿ ಸತ್ವಶಾಲಿ ಉರ್ದು ಭಾಷೆಯನ್ನು ಕೊಲೆ ಮಾಡಿದರು ಎಂದು ಆರೋಪಿಸಿದ್ದಾರೆ.