ಸಿದ್ದು ವರ್ಗ ಸಂಘರ್ಷ ಹುಟ್ಟು ಹಾಕುತ್ತಿದ್ದಾರೆ: ಸಿಎಂ ಗರಂ
ಬೆಂಗಳೂರು, ಮಂಗಳವಾರ, 27 ಏಪ್ರಿಲ್ 2010( 17:35 IST )
ಸಾದರ ಲಿಂಗಾಯಿತರನ್ನು ಪ್ರವರ್ಗ 2ಎಗೆ ಸೇರಿಸಿ ಸರ್ಕಾರ ಯಾವುದೇ ರೀತಿಯ ಆದೇಶಗಳನ್ನು ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇದನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳದೆ ವಿರೋಧ ಪಕ್ಷಗಳು ಬಾಯಿಗೆ ಬಂದಂತೆ ಮಾತನಾಡುತ್ತಿದೆ ಎಂದು ಆರೋಪಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಸರ್ಕಾರ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಇವರು ಯಾವ ವರ್ಗಕ್ಕೆ ಬರುತ್ತಾರೆ ಎಂಬುದನ್ನು 2002ನೇ ಸಾಲಿನಲ್ಲೇ ಸಮಾಜ ಕಲ್ಯಾಣ ಇಲಾಖೆ ತೀರ್ಮಾನ ಮಾಡಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ಹರಿಹಾಯ್ದ ಮುಖ್ಯಮಂತ್ರಿಗಳು, ಯಾವುದೇ ತಪ್ಪು ನಡೆಯದೆ ವಿನಾ ಕಾರಣ ಆರೋಪ ಹೊರಿಸಿ ಸಿದ್ಧರಾಮಯ್ಯನವರು ಜಾತಿ-ಮತಗಳ ನಡುವೆ ಸಂಘರ್ಷ ಉಂಟು ಮಾಡಿ ಸಮಾಜವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.
ಒಂದು ವೇಳೆ ಈ ವರ್ಗಕ್ಕೆ ಸೇರಿದವರಿಗೆ ಯಾವುದಾದರೂ ಸೌಲಭ್ಯ ಕೊಟ್ಟಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಕರೆಸಿ ಮಾತನಾಡಿದ್ದೇನೆ. ಸರ್ಕಾರ ಸಂವಿಧಾನ ಬದ್ಧವಾಗಿ ಕೆಲಸ ಮಾಡಿದೆಯೇ ಹೊರತು ಯಾವುದೇ ರೀತಿಯ ಪಕ್ಷಪಾತ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.