ಬಿಜೆಪಿ ಸರ್ಕಾರಕ್ಕೆ ಉದ್ಯಮಿಗಳು ಬೆಂಬಲವಾಗಿ ನಿಂತಿರುವ ಹಿನ್ನೆಲೆಯಲ್ಲಿ ಅವರ ಹಿತ ಕಾಯುವಲ್ಲಿ ನಿರತವಾಗಿದೆಯೇ ಹೊರತು, ಬಡಜನರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಜೆಡಿಎಸ್ ಹಾಗೂ ಎಡಪಕ್ಷಗಳು ಹಮ್ಮಿಕೊಂಡಿದ್ದ ಬೆಲೆ ಏರಿಕೆ ವಿರುದ್ಧದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಲೆ ಏರಿಕೆಗೆ ಕಾರಣವಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಗಳ ವಿರುದ್ಧ ಹರಿಹಾಯ್ದರು.
ಅಲ್ಲದೇ ಕಾಳಸಂತೆಕೋರರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವರ್ಗದ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. ದೊಡ್ಡ, ದೊಡ್ಡ ಮಾಲ್‌ಗಳನ್ನು ತೆರೆಯಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಉತ್ಪಾದನೆಯನ್ನೆಲ್ಲಾ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾರೆಂದು ದೂರಿದರು.
ದೇಶದ ಆಡಳಿತ ಚುಕ್ಕಾಣಿ ಹಿಡಿದವರಿಗೆ ಬಡಜನರ ನೋವು-ನಲಿವುಗಳು ಅರ್ಥವಾಗಬೇಕು. ಇಲ್ಲದಿದ್ದರೆ, ಅವರ ಬದುಕು ಮೂರಾಬಟ್ಟೆಯಾಗಲಿದೆ ಎಂದರು.