ಚಿಕ್ಕಬಳ್ಳಾಪುರ, ಬುಧವಾರ, 28 ಏಪ್ರಿಲ್ 2010( 12:29 IST )
ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ... 'ಮಲ್ಲಿಗೆ ಹೂವಿನೊಳಗಿನಿಂದ ಹಸಿರು ಕಲ್ಲಿನ ಚಿನ್ನದ ಉಂಗುರ ಸೃಷ್ಟಿಸಿ ಕೈಗಿತ್ತು, ವಿಭೂತಿಯನ್ನೂ ಸೃಷ್ಟಿಸಿ ಶಿವ ಸಾಯಿಬಾಬಾ ಹಣೆಗೆ ಹಚ್ಚಿದಾಗ' ಸ್ವತಃ ಗೃಹ ಸಚಿವ ವಿ.ಎಸ್.ಆಚಾರ್ಯ ಅವರು ಅಚ್ಚರಿಗೊಳಗಾದ ಘಟನೆ ಮಂಗಳವಾರ ನಡೆಯಿತು.
ಘಟನೆ ವಿವರ: ಇಲ್ಲಿನ ಹೊರವಲಯದಲ್ಲಿರುವ ಹಾರೋಬಂಡೆ ಸಮೀಪದ ಶಿವ ಸಾಯಿಬಾಬಾ ಆಶ್ರಮದಲ್ಲಿ, ಸ್ವಾಮೀಜಿಯ 52ನೇ ವರ್ಷದ ಹುಟ್ಟುಹಬ್ಬದ ಸಮಾರಂಭಕ್ಕೆ ಆಗಮಿಸಿದ್ದಾಗ, ವೇದಿಕೆಯಲ್ಲೇ ಶಿವಸಾಯಿ ಬಾಬಾ ಗೃಹ ಸಚಿವರಿಗೆ ಪವಾಡದಿಂದ ಉಂಗುರ ಸೃಷ್ಟಿಸಿ ಕೈಗಿತ್ತಾಗ ಭಕ್ತರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದ ಘಟನೆ ನಡೆಯಿತು.
ಅಂತೂ ಸ್ವಾಮೀಜಿಯ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದ್ದಲ್ಲದೆ, ಪುಕ್ಕಟ್ಟೆಯಾಗಿ ಚಿನ್ನದ ಉಂಗುರ ಸಿಕ್ಕಿದ್ದು ಆಚಾರ್ಯರಲ್ಲಿ ಅಚ್ಚರಿ ಮೂಡಿಸಿದ್ದಂತೂ ಸತ್ಯ. ಆದರೆ ಕಾರ್ಯಕ್ರಮದ ನಂತರ ಸುದ್ದಿಗಾರರು ಪವಾಡವನ್ನು ನೀವು ನಂಬುತ್ತೀರಾ ಅಂತ ಪ್ರಶ್ನಿಸಿದಾಗ, ಸ್ವಾಮೀಜಿ ಉಂಗುರ ನೀಡಿದ್ದು ಅಚ್ಚರಿ ಉಂಟು ಮಾಡಿದೆ ಎಂದರು. ನಮ್ಮ ನಡುವೆ ಈಗಲೂ ಇಂತಹ ಪವಾಡ ಪುರುಷರಿದ್ದಾರೆ ಎಂದು ಹೇಳಿ ಪುಳಕಿತರಾದರು. ಆದರೆ ನಿತ್ಯಾನಂದ ಸ್ವಾಮಿ ಕುರಿತು ಪ್ರಶ್ನಿಸಿದಾಗ ಈ ಬಗ್ಗೆ ತಾನೇನೂ ಹೇಳಲಾರೆ ಎಂದು ಜಾರಿಕೊಂಡರು!