ನಗರದಲ್ಲಿ ಈಗಾಗಲೇ ಬಿಡಿಎ ಕೈಗೆತ್ತಿಕೊಂಡಿರುವ 12 ಕೆರೆಗಳ ಜೊತೆಗೆ ಇನ್ನೂ 25 ಕೆರೆಗಳನ್ನು 200 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು, ಅಲ್ಲದೇ ಹಸಿರು ನಗರವನ್ನು ಮಾಡುವ ನಿಟ್ಟಿನಲ್ಲಿ ಲಾಲ್‌ಭಾಗ್ ಮಾದರಿಯಲ್ಲಿ ನಗರದ ನಾಲ್ಕು ದಿಕ್ಕುಗಳಲ್ಲಿ ಉದ್ಯಾನವನ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಕೆರೆಗಳನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ. ಮೂರು ವರ್ಷಗಳೊಳಗೆ ನೂರು ಕೆರೆಗಳನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕರ ಬಳಕೆಗೆ ಬಿಡಲಾಗುವುದು ಎಂದರು.
ಬುಧವಾರ ಬೆಳಿಗ್ಗೆ ನಗರದ ಉಲ್ಲಾಳ, ಕೋನಸಂದ್ರ, ಸೋಂಪುರ, ಗಾಂಧಿನಗರ, ಹೊಸಕೆರೆ ಮತ್ತು ಮಲ್ಲತ್ತಳ್ಳಿ ಕೆರೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರದ ಕೆರೆಗಳನ್ನು ಅಭಿವೃದ್ಧಿಪಡಿಸಿ ಅಲ್ಲಿ ಸುಂದರ ಉದ್ಯಾನವನ ಸೇರಿದಂತೆ ಸಾರ್ವಜನಿಕರನ್ನು ಆಕರ್ಷಿಸುವ ಎಲ್ಲ ರೀತಿಯ ಅನುಕೂಲತೆಗಳನ್ನು ಕಲ್ಪಿಸಲಾಗುವುದು ಎಂದರು.
1960ರ ಅವಧಿಯಲ್ಲಿ ನಗರದಲ್ಲಿ 260 ಕೆರೆಗಳಿದ್ದವು. ಆದರೆ ನಗರೀಕರಣದಿಂದಾಗಿ ಈ ಕೆರೆಗಳ ಸಂಖ್ಯೆ 134ಕ್ಕೆ ಇಳಿದಿದೆ. ಹಾಗಾಗಿ ನಗರದಲ್ಲಿ ಮತ್ತಷ್ಟು ಕೆರೆಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.