ರಾಸಲೀಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಿತ್ಯಾನಂದ ಸ್ವಾಮಿಗೆ ರಾಮನಗರ ಜಿಲ್ಲಾ ಕೋರ್ಟ್ ಬುಧವಾರ ಮತ್ತೆ ಎರಡು ದಿನಗಳ ಕಾಲ ಕಸ್ಟಡಿ ಅವಧಿಯನ್ನು ವಿಸ್ತರಿಸಿ ಸಿಐಡಿ ಪೊಲೀಸರ ವಶಕ್ಕೆ ಒಪ್ಪಿಸಿದೆ.
ಸೋಮವಾರವಷ್ಟೇ ನಿತ್ಯಾನಂದನನ್ನು ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸಂದರ್ಭದಲ್ಲಿ ಎರಡು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಿದ್ದರು. ಆ ಅವಧಿ ಬುಧವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸಂಜೆ ಪುನಃ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಹೆಚ್ಚಿನ ವಿಚಾರಣೆಗಾಗಿ ಮತ್ತೆರಡು ದಿನ ಕಸ್ಟಡಿ ವಿಸ್ತರಿಸಿ ಆದೇಶ ನೀಡಿದೆ.
ಕೋರ್ಟ್‌ನಲ್ಲೇ ಧ್ಯಾನ ಮಗ್ನನಾದ ನಿತ್ಯಾನಂದ!: ಬುಧವಾರ ಕೋರ್ಟ್‌ಗೆ ಹಾಜರುಪಡಿಸಿದ ಸಂದರ್ಭದಲ್ಲಿ, ನಿತ್ಯಾನಂದ ಸಿಐಡಿ ಪೊಲೀಸರು ತನ್ನಿಂದ ವಶಪಡಿಸಿಕೊಂಡ ರುದ್ರಾಕ್ಷಿ ಸರವನ್ನು ವಾಪಸು ಕೊಡುವಂತೆ ಸ್ವಾಮಿ ಪರ ವಕೀಲರುಮನವಿ ಮಾಡಿಕೊಂಡರು. ರುದ್ರಾಕ್ಷಿ ಸರದಿಂದ ನಿತ್ಯಾನಂದ ಪ್ರಾಣಕ್ಕೆ ಏನಾದರು ಅಪಾಯ ಮಾಡಿಕೊಳ್ಳಬಹುದೆಂಬ ಮುನ್ನೆಚ್ಚರಿಕೆಯಿಂದ ವಶಕ್ಕೆ ತೆಗೆದುಕೊಳ್ಳಲಾಗಿತ್ತು ಎಂದು ಸಿಐಡಿ ಪರ ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ಆ ಸಂದರ್ಭದಲ್ಲೇ ಕೋರ್ಟ್, ಸ್ವಾಮಿಯ ರುದ್ರಾಕ್ಷಿ ಸರ ಹಿಂದಿರುಗಿಸುವ ಬಗ್ಗೆ ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತ್ತು. ಏತನ್ಮಧ್ಯೆ ಅಸಾಮಿ ಕೋರ್ಟ್‌ನಲ್ಲೇ ಧ್ಯಾನಮಗ್ನನಾಗಿಬಿಟ್ಟಿದ್ದ ಘಟನೆಯೂ ನಡೆಯಿತು.
ಕಪಟ ನಾಟಕ ಇನ್ನೂ ಇದೆಯೇ?: ರಾಸಲೀಲೆ ಪ್ರಕರಣದಲ್ಲಿ ಬಂಧಿತನಾಗಿ ಸಿಐಡಿ ಪೊಲೀಸರ ವಶದಲ್ಲಿದ್ದ ಸಂದರ್ಭದಲ್ಲಿ ನಿತ್ಯಾನಂದ ನಿದ್ದೆ, ಧ್ಯಾನ, ಎದೆನೋವು ಎಂಬ ನಾಟಕದ ಮೂಲಕ ವಿಚಾರಣೆಗೆ ಅಡ್ಡಿಪಡಿಸುತ್ತಿದ್ದ. ಇದೀಗ ಕೋರ್ಟ್ ಮತ್ತೆರಡು ದಿನ ಕಸ್ಟಡಿ ಅವಧಿ ವಿಸ್ತರಿಸಿದೆ. ಅಂತೂ ವಿಚಾರಣೆಗೆ ಸಮರ್ಪಕವಾಗಿ ಸಹಕರಿಸಬಾರದೆಂಬ ಕುತಂತ್ರ ಸ್ವಾಮಿಯದ್ದಾಗಿದ್ದರಿಂದ ಎರಡು ದಿನದ ವಿಚಾರಣೆ ಸಂದರ್ಭದಲ್ಲಿ ಮತ್ತೆ ಯಾವ ರೀತಿಯ ನಾಟಕ ಆಡುತ್ತಾನೆ ಎಂಬುದನ್ನು ಕಾದು ನೋಡಬೇಕು.
ಪ್ರಕರಣಕ್ಕೆ ತಿರುವು ನೀಡಿದ ರಂಜಿತಾ: ಏತನ್ಮಧ್ಯೆ ರಾಸಲೀಲೆ ಪ್ರಕರಣದ ಕೇಂದ್ರ ಬಿಂದುವಾಗಿದ್ದ ನಟಿ ರಂಜಿತಾ ಬುಧವಾರ ಸ್ವತಃ ಸಿಐಡಿ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ವಿಚಾರಣೆಗೆ ಸಹಕರಿಸುವುದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ. ಈಗಾಗಲೇ ನಿತ್ಯಾನಂದನ ಕಾರು ಚಾಲಕ ಲೆನಿನ್ ಕರುಪ್ಪನ್ ವಿಚಾರಣೆ ನಡೆಸಿ, ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. ಇನ್ನು ನಟಿ ರಂಜಿತಾ ವಿಚಾರಣೆ ಸಂದರ್ಭ ಬಾಯ್ಬಿಡುವ ಅಂಶ ಪ್ರಕರಣಕ್ಕೆ ಮತ್ತಷ್ಟು ಕಾವು ನೀಡಲಿದೆ.