ಭ್ರಷ್ಟಚಾರದ ವಿರುದ್ಧ ಸಮರ ಸಾರಿದ್ದ ಲೋಕಾಯುಕ್ತ ಇದೀಗ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಅದಿರು ಸಾಗಾಣಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ಇಲ್ಲಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರ ಕಚೇರೆ ಮೇಲೆ ಬುಧವಾರ ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಳ್ಳುವ ಮೂಲಕ ರೆಡ್ಡಿ ಬ್ರದರ್ಸ್‌ಗಳಲ್ಲಿ ನಡುಕ ಹುಟ್ಟಿಸಿದ್ದಾರೆ.
ಹೊಸಪೇಟೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರ ಕಚೇರಿ ಸೇರಿದಂತೆ ಗಣಿ ಕಂಪನಿಗಳು ಹಾಗೂ ಅದಿರು ಸ್ಟಾಕ್ ಯಾರ್ಡ್ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದೆ.
ದಾಳಿಯಲ್ಲಿ ಓಬಳಾಪುರಂ ಗಣಿ ಸಂಸ್ಥೆ, ಲಕ್ಷ್ಮಿ ಮಿನರಲ್ಸ್, ವೆಂಕಟೇಶ್ವರ ಮಿನರಲ್ಸ್, ಪಿ.ಯೋಗಾನಂದ ಮೈನಿಂಗ್ ಕಂಪನಿ, ಹೊತ್ತುರು ಟ್ರೇಡರ್ಸ್, ಎಂ.ಬಿ.ಟಿ.ಮೈನಿಂಗ್ ಕಂಪನಿಗಳ ವ್ಯವಹಾರ ಮತ್ತು ದಾಖಲೆಗಳನ್ನು ತಂಡ ಪರಿಶೀಲಿಸಿದೆ.
ಐಬಿಎಂ ಅಧಿಕಾರಿಗಳ ಅಮಾನತು ಆದೇಶದ ನಡುವೆಯೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪರವಾನಗಿ ನೀಡಿ ಅಕ್ರಮಕ್ಕೆ ಸಹಕಾರ ನೀಡಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ಮಹತ್ವ ಪಡೆದಿದೆ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.