ಮನುಷ್ಯರು ಕುಡಿದು ರಸ್ತೆ, ಚರಂಡಿಯಲ್ಲಿ ಬಿದ್ದು ಹೊರಳಾಡುವುದು ಸಾಮಾನ್ಯ ಸಂಗತಿ. ಆದರೆ ಕಳ್ಳಭಟ್ಟಿ ಸಾರಾಯಿ ಹೊಟ್ಟೆತುಂಬಾ ಕುಡಿದು ಮತ್ತು ಏರಿಸಿಕೊಂಡ ಹೆಣ್ಣಾನೆಯೊಂದು ಗದ್ದೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದು ಇಕ್ಕಟ್ಟಿಗೆ ಸಿಲುಕಿದ ಘಟನೆ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ನಡೆದಿತ್ತು.
ಘಟನೆ ವಿವರ: ನಾಗರ ಹೊಳೆ ಅರಣ್ಯ ಪ್ರದೇಶ ವ್ಯಾಪ್ತಿಯ ತಿತಿಮತಿ ಸಮೀಪದ ಮಾವುಕಲ್ಲು ರಕ್ಷಿತಾರಣ್ಯದ ಕಾರೆಹಡ್ಲು ಗಿರಿಜನ ಹಾಡಿಯ ಸಮೀಪ ಕಳ್ಳಭಟ್ಟಿ ತಯಾರಿಸುವುದು ಸಾಮಾನ್ಯ. ಹೀಗೆ ನೀರು ಕುಡಿಯಲು ಆಗಮಿಸಿದ್ದ ಹೆಣ್ಣಾನೆಯೊಂದು ಗ್ರಾಮಸ್ಥರು ತಯಾರಿಸಿಟ್ಟಿದ್ದ ಕಳ್ಳಭಟ್ಟಿ ಸಾರಾಯಿಯನ್ನು ಹೊಟ್ಟೆ ತುಂಬಾ ಸೇವಿಸಿತ್ತು. ಅಂತೂ 'ಪರಮಾತ್ಮ' ಹೊಟ್ಟೆ ಸೇರುತ್ತಿದ್ದಂತೆಯೇ ಆನೆ ತೂರಾಡುತ್ತ ಭತ್ತದ ಗದ್ದೆಯಲ್ಲೇ ಬಿದ್ದು ಹೊರಳಾಡ ತೊಡಗಿದಾಗ, ಗ್ರಾಮಸ್ಥರು ಆನೆಯನ್ನು ಎಬ್ಬಿಸಲು ಹರಸಾಹಸ ಪಟ್ಟು ಸುಸ್ತಾಗಿದ್ದರು.
ಅಂತೂ ಕೊನೆಗೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ನಂತರ ಅರಣ್ಯಾಧಿಕಾರಿಗಳು ದಸರಾ ಆನೆಗಳ ನೆರವಿನೊಂದಿಗೆ ಕುಡಿದು ಬಿದ್ದಿದ್ದ ಆನೆಯನ್ನು ಮೇಲಕ್ಕೇಳಿಸಲು ಸಾಥ್ ನೀಡಿದವು. ಅಂತೂ ಅತ್ತ-ಇತ್ತ ಹೊರಳಿ ಮತ್ತು ಇಳಿಯುತ್ತಿದ್ದಂತೆಯೇ ಕಣ್ಣು ಬಿಟ್ಟ 'ಕರಿಮುಖ' ಸುತ್ತಲೂ ನೆರೆದಿದ್ದ ಜನರು, ಆನೆಗಳನ್ನು ನೋಡಿ ದಿಗಿಲು ಬಿದ್ದು ಮೇಲಕ್ಕೆದ್ದು ಕಾಡಿನತ್ತ ಓಟ ಕಿತ್ತಿತ್ತು!