ರಾಸಲೀಲೆ ಪ್ರಕರಣದಲ್ಲಿ ಸಿಐಡಿ ಪೊಲೀಸರ ಅತಿಥಿಯಾಗಿರುವ ಕಾಮಿ ಸ್ವಾಮಿ ನಿತ್ಯಾನಂದನ ವಿಚಾರಣೆಯಿಂದ ಹಲವು ಮಾಹಿತಿಗಳು ಬಯಲಾಗತೊಡಗಿದ್ದು, ಹತ್ತಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಲ್ಲಿ 32 ಕೋಟಿ ರೂಪಾಯಿ ಪತ್ತೆಯಾಗುವ ಮೂಲಕ ಕೋಟ್ಯಾಧೀಶ ಸ್ವಾಮಿ ಎಂಬುದನ್ನು ಸಾಬೀತುಪಡಿಸಿದ್ದಾನೆ.
ಸ್ವಯಂಘೋಷಿತ ದೇವಮಾನವ ಎಂದೇ ಬಿಂಬಿಸಿಕೊಂಡಿರುವ ಕಾಮಿ ಸ್ವಾಮಿ ನಿತ್ಯಾನಂದ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿನ ಖಾತೆಗಳಲ್ಲಿ 32 ಕೋಟಿ ರೂಪಾಯಿ ಠೇವಣಿ ಹೊಂದಿರುವುದನ್ನು ಸಿಐಡಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ತನಿಖೆಯಿಂದ ಕಂಡು ಹಿಡಿದಿದ್ದಾರೆ.
ಆ ನಿಟ್ಟಿನಲ್ಲಿ ನಿತ್ಯಾನಂದನ ಎಲ್ಲಾ ಆರ್ಥಿಕ ವ್ಯವಹಾರಗಳ ಮೂಲಗಳ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ. ಆತನ ಕೆಲವು ಬ್ಯಾಂಕ್ ಖಾತೆಗಳಲ್ಲಿ ಎರಡು ಟ್ರಸ್ಟ್ ಹೆಸರಲ್ಲಿ ವ್ಯವಹಾರ ನಡೆಸುತ್ತಿದ್ದ. ಹಾಗಾಗಿ ಈ ಖಾತೆಗಳಿಗೆ ಯಾವ ಮೂಲಗಳಿಂದ ಹಣ ಹರಿದು ಬರುತ್ತಿದೆ ಎಂಬ ಅಂಶದ ಬಗ್ಗೆಯೂ ಬೆನ್ನತ್ತಿದ್ದಾರೆ.
2003ರಲ್ಲಿ ರಿಜಿಸ್ಟರ್ಡ್ ಆದ ಧ್ಯಾನಪೀಠ ಚಾರಿಟೇಬಲ್ ಟ್ರಸ್ಟ್ (ಡಿಪಿಸಿಟಿ) ಹಾಗೂ 2005ರಲ್ಲಿ ರಿಜಿಸ್ಟರ್ಡ್ ಆದ ನಿತ್ಯಾನಂದ ಧ್ಯಾನಪೀಠಂ ಟ್ರಸ್ಟ್ (ಎನ್‌ಡಿಟಿ) ಹೆಸರಿನ ಎರಡು ಬ್ಯಾಂಕ್ ಖಾತೆಗೆ ವಿವಿಧ ಮೂಲಗಳಿಂದ ಅಪಾರ ಪ್ರಮಾಣದಲ್ಲಿ ಹಣ ಜಮಾವಣೆಗೊಂಡಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಐಡಿ ಅಧಿಕಾರಿಗಳು ವಿವರಿಸಿದ್ದಾರೆ.
ಪೊಲೀಸರ ಮನವಿಯ ಮೇರೆಗೆ ಈ ಖಾತೆಯ ವ್ಯವಹಾರವನ್ನು ಬ್ಯಾಂಕ್ ಸ್ಥಗಿತಗೊಳಿಸಿದೆ. ಧ್ಯಾನಪೀಠ ಟ್ರಸ್ಟ್ ಹೆಸರಿನಲ್ಲಿ 25 ಕೋಟಿ ರೂಪಾಯಿ ಠೇವಣಿ ಇಟ್ಟಿದ್ದನ್ನು ಕೆಲ ದಿನಗಳ ಹಿಂದೆಯೇ ಪೊಲೀಸರು ಪತ್ತೆ ಹಚ್ಚಿದ್ದರು. ಈ ಎಲ್ಲ ಹಣವನ್ನು ಭಕ್ತರು ನೀಡಿದ್ದರೇ ಅಥವಾ ನಿತ್ಯಾನಂದನ ಸಹೋದರ ನಿತ್ಯೇಶ್ವರಾನಂದ ನಡೆಸುತ್ತಿದ್ದ ರಫ್ತು ವ್ಯವಹಾರದಲ್ಲಿ ಗಳಿಸಿದ ಲಾಭವೆ ಎಂಬುದು ಖಚಿತವಾಗಿಲ್ಲ.
ನಿತ್ಯೇಶ್ವರಾನಂದ ದೇವರ ವಿಗ್ರಹಗಳನ್ನು ವಿದೇಶಕ್ಕೆ ರಫ್ತು ಮಾಡುತ್ತಿದ್ದ. ಆತ ಇಲ್ಲಿನ ಬೆಲೆಗಿಂತ ನಾಲ್ಕೈದು ಪಟ್ಟು ಹೆಚ್ಚಿನ ಬೆಲೆಗೆ ವಿಗ್ರಹಗಳನ್ನು ವಿದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ಎಂಬ ಅಂಶ ತನಿಖೆಯಿಂದ ತಿಳಿದುಬಂದಿದೆ.
ಇದೀಗ ನಿತ್ಯಾನಂದನ ಹಲವು ಶಾಖೆ ಅಮೆರಿಕ, ಯುರೋಪ್, ದಕ್ಷಿಣ ಅಮೆರಿಕ ಮತ್ತು ಭಾರತದಲ್ಲಿ ಕಾರ್ಯಾಚರಿಸುತ್ತಿದ್ದು, ಅಲ್ಲಿನ ಆರ್ಥಿಕ ವ್ಯವಹಾರಗಳ ದಾಖಲಾತಿಗಳ ಬಗ್ಗೆಯೂ ತನಿಖೆ ನಡೆಸಲು ಮುಂದಾಗಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ಈತನ ತೇವಲು ಕೇವಲ ರಾಸಲೀಲೆ ಮಾತ್ರವಲ್ಲ, ಚಿನ್ನ ಸ್ಮಗ್ಲಿಂಗ್‌ನಲ್ಲಿಯೂ ನಿಪುಣನಾಗಿದ್ದ. ಆ ನಿಟ್ಟಿನಲ್ಲಿ ಐಶಾರಾಮಿ ಜೀವನಕ್ಕಾಗಿ 2008ರಲ್ಲಿ ಕೆನಡಾ ಕರಾವಳಿ ಅಥವಾ ಇಂಡೋನೇಷ್ಯಾದಲ್ಲಿ 50 ಲಕ್ಷ ಡಾಲರ್ ಬೆಲೆ ಬಾಳುವ ಖಾಸಗಿ ದ್ವೀಪಪ್ರದೇಶವೊಂದನ್ನು ಖರೀದಿಸುವ ಯೋಜನೆ ಹಾಕಿಕೊಂಡಿರುವ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.
ನಟಿ ರಂಜಿತಾ ವಿಚಾರಣೆ: ಏತನ್ಮಧ್ಯೆ ರಾಸಲೀಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ತಮಿಳು ನಟಿ ರಂಜಿತಾ ಮಂಗಳವಾರ ಸಿಐಡಿ ಅಧಿಕಾರಿಗಳಿಗೆ ಸ್ವತಃ ದೂರವಾಣಿ ಕರೆ ಮಾಡಿ, ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಿದ್ದವಿರುವುದಾಗಿ ತಿಳಿಸಿದ್ದಳು. ಆ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಆಂಧ್ರಪ್ರದೇಶದಿಂದ ಆಗಮಿಸಿದ್ದ ರಂಜಿತಾ ಸಿಐಡಿ ಅಧಿಕಾರಿಗಳನ್ನು ಭೇಟಿಯಾದರು. ನಂತರ ರಂಜಿತಾಳನ್ನು ರಹಸ್ಯ ಸ್ಥಳವೊಂದರಲ್ಲಿ ಸಿಐಡಿ ತೀವ್ರ ತನಿಖೆಗೆ ಗುರಿಪಡಿಸಿದ್ದಾರೆ. ಇದೀಗ ರಂಜಿತಾ ನೀಡುವ ಮಾಹಿತಿ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಒಟ್ಟಾರೆ ನಿತ್ಯಾನಂದನ ಕಾಮಕಾಂಡ ಮತ್ತು ಕರ್ಮಕಾಂಡವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ನಿತ್ಯಾನಂದನ ಕಾರು ಚಾಲಕ ಲೆನಿನ್ ಕರುಪ್ಪನ್‌ನ್ನೂ ಸಿಐಡಿ ಅಧಿಕಾರಿಗಳು ವಿಚಾರಣೆ ಒಳಪಡಿಸಿ, ಮಾಹಿತಿ ಕಲೆ ಹಾಕಿದ್ದರು.