ಉತ್ತರ ಅಮೆರಿಕ ವಿಶ್ವ ಕನ್ನಡಿಗರ ಅಸೋಸಿಯೇಶನ್ (ನಾವಿಕ) ಪ್ರಥಮ ವಿಶ್ವ ಕನ್ನಡಿಗರ ಸಮ್ಮೇಳನವನ್ನು ಜುಲೈ 2 ರಿಂದ 4ರವರೆಗೆ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಸಲು ನಿರ್ಧರಿಸಿದೆ.
ಮೂರು ದಿನಗಳ ಕಾಲ ನಡೆಯಲಿರುವ ವಿಶ್ವ ಕನ್ನಡಿಗರ ಸಮ್ಮೇಳನದಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಕನ್ನಡಿಗರು ಭಾಗವಹಿಸುವ ನಿರೀಕ್ಷೆ ಇದೆ ಎಂದು ನಾವಿಕ ವಿಶ್ವ ಕನ್ನಡಿಗರ ಸಮ್ಮೇಳನದ ಅಧ್ಯಕ್ಷ ಡಾ.ಶ್ರೀಅಯ್ಯಂಗಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉತ್ತರ ಅಮೆರಿಕದಲ್ಲಿ ಸುಮಾರು 60ಸಾವಿರ ಕನ್ನಡಿಗರಿದ್ದು, ಅವರನ್ನೆಲ್ಲ ಒಂದುಗೂಡಿಸಿ, ರಾಜ್ಯದ ಅಭಿವೃದ್ಧಿಗೆ ಪೂರಕವಾಗಲು ಸಮ್ಮೇಳನ ಆಯೋಜಿಸಿದ್ದು, ಮೂರು ದಿನಗಳ ಕಾಲ ನಡೆಯುವ ಸಮ್ಮೇಳನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದರು.
ಮೂರು ದಿನಗಳ ಕಾಲ ಈ ಸಾಂಸ್ಕೃತಿಕ ಕಾರ್ಯಕ್ರಮಗಳು ಅಮೆರಿಕಾ ಕನ್ನಡಿಗರು ಮತ್ತು ರಾಜ್ಯದ ಕನ್ನಡಿಗರ ನಡುವೆ ಸಂವಾದ, ಗೋಷ್ಠಿಗಳು ನಡೆಯಲಿದೆ ಎಂದು ವಿವರಿಸಿದರು. ಉತ್ತರ ಅಮೆರಿಕಾದಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪನೆ ಸೇರಿದಂತೆ ಅಲ್ಲಿನ ಕನ್ನಡಿಗರಿಗೆ ಕನ್ನಡ ಕಲಿಸುವ ಕೆಲಸ ಮಾಡಲಾಗುವುದು. ಜೊತೆಗೆ ಕರ್ನಾಟಕದ ಹಿಂದುಳಿದ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅವುಗಳ ಅಭಿವೃದ್ಧಿಗೆ ಮುಂದಾಗುವುದಾಗಿ ಅವರು ಹೇಳಿದರು.