ಹೊಗೇನಕಲ್ ಕಾಮಗಾರಿ ನಿಲ್ಸಿ: ತಮಿಳುನಾಡಿಗೆ ಕರವೇ ಎಚ್ಚರಿಕೆ
ಬೆಂಗಳೂರು, ಗುರುವಾರ, 29 ಏಪ್ರಿಲ್ 2010( 17:22 IST )
ಹೊಗೇನಕಲ್ ವಿವಾದ ಮತ್ತೆ ಭುಗಿಲೆದ್ದಿದ್ದು, ಒಂದು ವೇಳೆ ಹೊಗೇನಕಲ್ ಕಾಮಗಾರಿಯನ್ನು ಮತ್ತೆ ಮುಂದುವರೆಸಿದ್ದೇ ಆದಲ್ಲಿ, ತಮಿಳುನಾಡಿನಿಂದ ರಾಜ್ಯ ಪ್ರವೇಶಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ಹೊಗೇನಕಲ್ ಯೋಜನೆಯ ಕುರಿತು ನಡೆದ ಖಂಡನಾ ಸಭೆಯಲ್ಲಿ ಕೈಗೊಂಡ ನಿರ್ಣಯದಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ಅಷ್ಟೇ ಅಲ್ಲ. ತಮಿಳುನಾಡಿನ ಚಾನೆಲ್, ಕೇಬಲ್ ನೆಟ್‌ವರ್ಕ್, ತಮಿಳು ಸಿನಿಮಾ ಪ್ರದರ್ಶನಕ್ಕೆ ಅವಕಾಶವನ್ನು ಮಾಡಿಕೊಡುವುದಿಲ್ಲ ಎಂದು ಕರವೇ ತಿಳಿಸಿದೆ.
ಇದರ ಜೊತೆಗೆ ಈ ಕುರಿತು ಕೇಂದ್ರದೊಂದಿಗೆ ಮಾತುಕತೆಗೆ ಮುಂದಾಗಿಲ್ಲ ಎಂದಾಗದಿದ್ದಲ್ಲಿ ರಾಜ್ಯದಲ್ಲಿರುವ ಸಂಸದರ ಮನೆಗಳಿಗೆ ಮುತ್ತಿಗೆ ಹಾಕಿ ದಿಗ್ಬಂದನ ಹೇರಲಾಗುವುದು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎನ್. ನಾರಾಯಣ ಗೌಡ ಗುಡುಗಿದ್ದಾರೆ.
ಅಷ್ಟೇ ಅಲ್ಲ, ಈ ಬಗ್ಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಜಂಟಿ ಸಮೀಕ್ಷೆ ನಡೆಸಬೇಕು. ಕಾಮಗಾರಿಗೆ ಸಂಬಂಧಿಸಿದಂತೆ ತಮಿಳುನಾಡಿನ ನಿಲುವು ಖಂಡಿಸಿ ರಾಜ್ಯ ಸರ್ಕಾರ ಸರ್ವಪಕ್ಷಗಳ ನಿಯೋಗ ಕರೆದೊಯ್ದು ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಬೇಕು ಹೇಳಿದರು.
ಈ ಬಗ್ಗೆ ಸಭೆಯಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಮಾಜಿ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್, ಮುಖ್ಯಮಂತ್ರಿ ಯಡಿಯೂರಪ್ಪನವರು (ಜ್ಯೂನಿಯರ್ ತಂಬಿ) ಕರುಣಾನಿಧಿಯವರನ್ನು (ಸಿನಿಯರ್ ತಂಬಿ) ಅಣ್ಣ ಎಂದು ಕರೆಯುತ್ತಿದ್ದಾರೆ. ಆದರೆ ಮುಂದೆ ಈ ಸಿನಿಯರ್ ತಂಬಿ ಯಡಿಯೂರಪ್ಪನವರಿಗೆ ತಂಬಿಗೆ ಕೊಟ್ಟು ಕಳುಹಿಸದಿದ್ದರೆ ಸಾಕು ಎಂದು ವ್ಯಂಗ್ಯವಾಡಿದ್ದಾರೆ.