ಸಾದರ ಲಿಂಗಾಯಿತರನ್ನು ಪ್ರವರ್ಗ 2ಎಗೆ ಸೇರಿಸಿಕೊಳ್ಳುವ ಬಗ್ಗೆ ನಡೆದಿರುವ ವಿವಾದ ಈಗ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಈ ವಿವಾದ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕೈವಾಡವಿದೆ. ಈ ನಿಟ್ಟಿನಲ್ಲಿ ತಕ್ಷಣವೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾದರ ಲಿಂಗಾಯಿತರಿಗೆ ನೀಡಿರುವ 2ಎ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಇದುವರೆಗೆ ನೀಡಿರುವ ಸವಲತ್ತುಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಸರ್ಕಾರದ ಸಂಪೂರ್ಣ ದಾಖಲೆಗಳೊಂದಿಗೆ ಮಾತನಾಡುತ್ತಿದ್ದೇನೆ. ಸಾದರ ಲಿಂಗಾಯಿತರನ್ನು 2ಎಗೆ ಸೇರಿಸಲಾಗಿದೆ ಎಂದು ಸರ್ಕಾರ ನಮೂದಿಸಿದೆ. ಈ ಮೂಲಕ ಒಟ್ಟಿ 2ಎನಲ್ಲಿರುವ 102 ಜಾತಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಆದರೆ ಇದೀಗ ಇದರ ಬಗ್ಗೆ ಏನೂ ಗೊತ್ತಿಲ್ಲದವರಂತೆ ಸರ್ಕಾರ ಮಾತು ಬದಲಾಯಿಸುತ್ತಿದೆ ಎಂದು ಅಸಮಾಧಾನವ್ಯಕ್ತಪಡಿಸಿದರು.
ಅಲ್ಲದೆ, ಈ ಬಗ್ಗೆ ಬಿಜೆಪಿ ಮುಖ್ಯಮಂತ್ರಿ ಚಂದ್ರು ಅವರೇ ಈ ಬಗ್ಗೆ ಮಾಹಿತಿ ನೀಡಿದ್ದು, 42,000 ಮಂದಿಗೆ ಜಾತಿ ಪ್ರಮಾಣ ಪತ್ರ ನೀಡಲಾಗಿದೆ ಎಂದು ಹೇಳಿದ್ದಾರೆ. ಹಾಗಾದರೆ ಇದು ಸುಳ್ಳಾ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಮಾಹಿತಿ ಹಕ್ಕು ಕಾಯ್ದೆಯಡಿ ನೀಡಲಾಗಿರುವ ಸವಲತ್ತುಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದೇನೆ ಎಂದ ಅವರು, ಇದರ ಪ್ರಕಾರ, ಹರಪ್ಪನ ಹಳ್ಳಿಯ ಗ್ರಾಮವೊಂದರಲ್ಲೇ 287 ಮಂದಿಗೆ ಜಾತಿ ಪ್ರಮಾಣ ಪತ್ರ ನೀಡಲಾಗಿರುವುದು ತಿಳಿದು ಬಂದಿದೆ. ಆದರೆ ಮುಖ್ಯಮಂತ್ರಿಗಳು ಸತ್ಯವನ್ನು ಮುಚ್ಚಿಟ್ಟು ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ದೂರಿದರು.