ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಪರಿಶಿಷ್ಟ ಜಾತಿ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಬೂಟಾ ಸಿಂಗ್ ಹೇಳಿಕೆಯನ್ನು ಖಂಡಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹಿಂದುಳಿದ ವರ್ಗದ ಅಭಿವೃದ್ದಿಯಲ್ಲಿ ರಾಜ್ಯ ದೇಶದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಗದ ಅಭಿವೃದ್ದಿ ವಿಷಯದಲ್ಲಿ ಕೇಂದ್ರದ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ ಎಂಬ ಹೇಳಿಕೆಯಲ್ಲಿ ಯಾವುದೇ ಆರೋಪವಿಲ್ಲ. 2008-09ನೇ ಸಾಲಿನಲ್ಲಿ ಕೇಂದ್ರ ನೀಡಿದ್ದ 146 ಕೋಟಿ ರೂ. ಜತೆಗೆ 41 ಕೋಟಿ ರೂ. ಸೇರಿಸಿ ಪೂರ್ಣ ಹಣವನ್ನು ಅಭಿವೃದ್ದಿಗೆ ವ್ಯಯಿಸಲಾಗಿದೆ ಎಂದರು.
ಅಲ್ಲದೆ, ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಜೆಟ್‌ನಲ್ಲಿ ಶೇ.22.75ರಷ್ಟು ಹಣವನ್ನು ದಲಿತರ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ ಎಂದು ತಿಳಿಸಿದ ಅವರು, ದೇಶದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಈ ಪ್ರಮಾಣ ಹೆಚ್ಚಾಗಿದೆ ಎಂದು ವಿವರಿಸಿದರು.
ಈ ವರ್ಗದ ವಿದ್ಯಾರ್ಥಿಗಳು ಶಾಲೆ ಬಿಡುವ ಪ್ರಮಾಣ ರಾಜ್ಯದಲ್ಲಿ ಹೆಚ್ಚಾಗಿದೆ ಎಂಬ ಬೂಟಾ ಅವರ ಆರೋಪವನ್ನು ತಳ್ಳಿ ಹಾಕಿದ ಮುಖ್ಯಮಂತ್ರಿಗಳು, ಮಧ್ಯಾಹ್ನದ ಬಿಸಿಯೂಟ, ಉಚಿತ ಬೈಸಿಕಲ್ ಮುಂತಾದ ಯೋಜನೆಗಳನ್ನು ನೀಡಲಾಗಿದೆ. ಅಲ್ಲದೆ, ಇಂತಹ ಯೋಜನೆಗಳ ಪರಿಣಾಮ ಹಾಜರಾತಿ ಪ್ರಮಾಣ ಶೇ. 75ರಷ್ಟಿದೆ ಎಂದು ತಿಳಿಸಿದ್ದಾರೆ.