'ತಾನು ಮಾನವನಲ್ಲ, ದೇವಮಾನವ. ಅಲ್ಲದೇ ನಾನು ಷಂಡನಾಗಿದ್ದು ನಟಿ ರಂಜಿತಾಳೊಂದಿಗೆ ರಾಸಲೀಲೆ ನಡೆಸುವುದು ಹೇಗೆ ಎಂದು ಸಿಐಡಿ ಅಧಿಕಾರಿಗಳಿಗೆ ತಿಳಿಸಿದ್ದ ಕಾಮಿ ನಿತ್ಯಾನಂದಸ್ವಾಮಿ, ಸಿಡಿಯಲ್ಲಿ ಇರುವುದು ತಾನಲ್ಲ ಎಂದಿದ್ದ. ಆದರೆ ಇದೀಗ ರಾಸಲೀಲೆ ವೀಡಿಯೋದಲ್ಲಿರುವುದು ನಿತ್ಯಾನಂದ ಸ್ವಾಮಿಯೇ ಎಂದು ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯ ವರದಿ ಸ್ಪಷ್ಟಪಡಿಸಿರುವುದಾಗಿ ಸಿಐಡಿ ಮೂಲಗಳು ತಿಳಿಸಿವೆ.
ಆದರೆ ಈ ವರದಿಯಿಂದ ನಿತ್ಯಾನಂದನಿಗೆ ಹೆಚ್ಚಿನ ತೊಂದರೆ ಆಗಲಾರದು ಎಂಬುದು ಅಧಿಕಾರಿಗಳ ನುಡಿ. ಅಲ್ಲದೇ, ನಿತ್ಯಾನಂದನ ಮೇಲೆ ದಾಖಲು ಮಾಡಿರುವ 377 ಸಲಿಂಗಕಾಮ ದೂರಿಗೆ ಸಂಬಂಧಪಟ್ಟಂತೆ ಸೂಕ್ತ ಪುರಾವೆ ದೊರೆತರಷ್ಟೇ ಕಾಮಿ ನಿತ್ಯಾನಂದನ ಪ್ರಕರಣ ಮತ್ತಷ್ಟು ಗಟ್ಟಿಯಾಗಲಿದೆಯಂತೆ.
ಏತನ್ಮಧ್ಯೆ ಶುಕ್ರವಾರ ನಿತ್ಯಾನಂದನ ಕಸ್ಟಡಿ ಅವಧಿ ಮುಕ್ತಾಯವಾಗಿದ್ದರಿಂದ ನಿನ್ನೆ ರಾಮನಗರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸ್ವಾಮಿಗೆ ಮೇ 12ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಕಳೆದ ಎಂಟು ದಿನಗಳ ಕಾಲ ಸಿಐಡಿ ಪೊಲೀಸರ ವಶದಲ್ಲಿದ್ದ ನಿತ್ಯಾನಂದ ಧ್ಯಾನ, ನಿದ್ದೆ, ಎದೆನೋವು ಎಂಬೆಲ್ಲಾ ನಾಟಕವಾಡುವ ಮೂಲಕ ವಿಚಾರಣೆಯಿಂದ ನುಣುಚಿಕೊಳ್ಳಲು ಸಾಕಷ್ಟು ಯತ್ನ ನಡೆಸಿದ್ದ. ಅಂತೂ ಪಟ್ಟು ಬಿಡದ ಅಧಿಕಾರಿಗಳು ಕೆಲವೊಂದು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಆದರೆ ರಾಸಲೀಲೆ ಪ್ರಕರಣದ ಕುರಿತಂತೆ ಬಲವಾದ ಸಾಕ್ಷ್ಯ ದೊರೆಯದಿರುವುದು ಅಧಿಕಾರಿಗಳಿಗೆ ತಲೆಬಿಸಿ ಉಂಟು ಮಾಡಿದ್ದರೆ, ನಿತ್ಯಾನಂದನ ಮುಖದಲ್ಲಿನ ಮಂದಹಾಸ ಮಾತ್ರ ಎಂದಿನಂತೆಯೇ ಇದೆ!
ಧ್ಯಾನಪೀಠಕ್ಕೆ ಸಂಬಂಧಿಸಿದಂತೆ 12ಬ್ಯಾಂಕ್ ಅಕೌಂಟ್ ದಾಖಲೆಯನ್ನೂ ವಶಪಡಿಸಿಕೊಂಡಿದ್ದು, ಇದರಲ್ಲಿ 34ಕೋಟಿ ರೂಪಾಯಿ ಠೇವಣಿ ಇರುವುದು ಪತ್ತೆಯಾಗಿತ್ತು. ಇಷ್ಟು ಹಣದ ಮೇಲೆ ಧ್ಯಾನಪೀಠದಿಂದ 7ಕೋಟಿ ರೂಪಾಯಿ ತೆರಿಗೆ ಪಾವತಿಸಲಾಗಿದೆ. ಆ ನಿಟ್ಟಿನಲ್ಲಿ ಇದು ಕೂಡ ಪೊಲೀಸರಿಗೆ ಹಿನ್ನಡೆ ಉಂಟು ಮಾಡಿದೆ ಎನ್ನಲಾಗಿದೆ.