ಉದ್ಯಾನಗರಿಯ ಚಿನ್ನಸ್ವಾಮಿಯ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಸಂಭವಿಸಿದ ಅವಳಿ ಬಾಂಬ್ ಸ್ಫೋಟ ಪ್ರಕರಣದ ಹಿಂದೆ ಭೂಗತ ಪಾತಕಿಗಳ ಕೈವಾಡ ಇರುವ ಸಾಧ್ಯತೆ ದಟ್ಟವಾಗಿದೆ ಎಂದು ಗೃಹ ಸಚಿವ ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಫೋಟ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಸ್ಪಷ್ಟ ಸುಳಿವು ದೊರೆಯುವ ಸಾಧ್ಯತೆ ಇದೆ ಎಂದರು.
ಬೆಟ್ಟಿಂಗ್ ಅಥವಾ ಭೂಗತ ಪಾತಕಿಗಳ ನಡುವೆ ಸಂಪರ್ಕ ಇರುತ್ತದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಸ್ಫೋಟಕ್ಕೆ ಯತ್ನಿಸಿದವರ ಉದ್ದೇಶ ಪಂದ್ಯಗಳನ್ನು ಸ್ಥಳಾಂತರಿಸುವುದೇ ಆಗಿತ್ತು ಎಂದ ಅವರು, ಯಾಕೆಂದರೆ ಬೆಳಿಗ್ಗೆ 11 ಗಂಟೆ, ಮಧ್ಯಾಹ್ನ 12 ಮತ್ತು 3.15ಕ್ಕೆ ಬಾಂಬ್‌ಗೆ ಟೈಮರ್ ಅಳವಡಿಸಲಾಗಿತ್ತು. ಆದರೆ ಪಂದ್ಯ ಸಂಜೆ 4ಗಂಟೆಗೆ ನಿಗದಿಯಾಗಿತ್ತು. ಆ ನೆಲೆಯಲ್ಲಿ ಜನರನ್ನು ಕೊಲ್ಲುವ ಉದ್ದೇಶಕ್ಕಿಂತ ಜನರಲ್ಲಿ ಭಯ ಉಂಟುಮಾಡುವುದೇ ಮುಖ್ಯ ಉದ್ದೇಶವಾಗಿತ್ತು ಎಂದು ವಿವರಿಸಿದರು.