ತಾಕತ್ತಿದ್ರೆ ರೆಡ್ಡಿ ಬ್ರದರ್ಸ್ ರಾಜೀನಾಮೆ ಪಡೆಯಿರಿ: ಎಚ್‌ಡಿಕೆ
ಬೆಂಗಳೂರು, ಶನಿವಾರ, 1 ಮೇ 2010( 13:37 IST )
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ತಾಕತ್ತಿದ್ದರೆ, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ ಬಳ್ಳಾರಿಯ ಮೂವರು ಸಚಿವರಿಂದ ರಾಜೀನಾಮೆ ಪಡೆಯಲಿ ಎಂದು ಸಂಸದ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಸೂಚನೆಯಂತೆ ತನಿಖೆ ನಡೆಸಿರುವ ಭಾರತೀಯ ಸರ್ವೇ ಇಲಾಖೆ, ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ವರದಿ ಮಾಡಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ವರದಿ ಕೈ ಸೇರಿದ ಬಳಿಕ ಪ್ರತಿಕ್ರಿಯಿಸುವುದಾಗಿ ಹೇಳಿದ್ದಾರೆ. ಆದರೆ ಐಪಿಎಲ್ ವಿಚಾರದಲ್ಲಿ ಶಶಿ ತರೂರ್ ರಾಜೀನಾಮೆಗೆ ಬಯಸುವ ಬಿಜೆಪಿ, ಮೊದಲು ಪಕ್ಷದವರು ಮಾಡುತ್ತಿರುವ ಹಗರಣಗಳ ಕುರಿತು ಚಿಂತಿಸಲಿ ಎಂದು ತರಾಟೆಗೆ ತೆಗೆದುಕೊಂಡರು.
ಅಲ್ಲದೆ, ಅಕ್ರಮ ಗಣಿಗಾರಿಕೆ ಬಗ್ಗೆ ಏನೂ ಗೊತ್ತಿಲ್ಲ ಎಂದು ಯಡಿಯೂರಪ್ಪ ಹೇಳಿಕೆ ನೀಡುತ್ತಿದ್ದಾರೆ. ಆದರ ಇದು ಒಬ್ಬ ಮುಖ್ಯಮಂತ್ರಿ ಕೊಡುವ ಉತ್ತರವೇ? ಇಂಥ ಹೇಳಿಕೆ ನೀಡುವ ಮೂಲಕ ಯಾರ ಕಣ್ಣಿಗೆ ಮಣ್ಣೆರಚಲು ಹೊರಟಿದ್ದೀರಿ ಎಂದು ಅವರು ಕಿಡಿಕಾರಿದರು.
ಇದೇ ವೇಳೆ ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಸಾಲ ಮಾಡುವ ಕುರಿತು ಹೇಳಿದಾಗ, ರಾಜ್ಯವನ್ನು ಮಾರಾಟಕ್ಕೆ ಇಡುತ್ತೀರಾ ಎಂದು ಗದ್ದಲ ಮಾಡಿದ್ದರು. ಆದರೆ ಈಗ ಸರ್ಕಾರ 25 ಸಾವಿರ ಕೋಟಿ ರೂ. ಸಾಲ ಮಾಡಲು ಮುಂದಾಗಿದೆ. ಈಗ ಜನತೆಯನ್ನೇ ಮಾರಾಟ ಮಾಡುತ್ತಿದ್ದೀರಾ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ಈ ನಡುವೆ, ರಾಜ್ಯದಲ್ಲಿ ಟೆಲಿಫೋನ್ ಕದ್ದಾಲಿಕೆ ಬಗ್ಗೆ ತನ್ನನ್ನು ತನಿಖಾ ಸಮಿತಿಯ ಅಧ್ಯಕ್ಷನನ್ನಾಗಿ ಮಾಡಲಿ ಎಂದು ಅವರು ಸಿಎಂಗೆ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳ ಸಚಿವರೇ ನನ್ನ ಮುಂದೆ ಗೋಳು ತೋಡಿಕೊಂಡಿದ್ದಾರೆ. ಅವರ ಮೊಬೈಲ್ ಫೋನ್‌ಗಳನ್ನು ಕದ್ದಾಲಿಸಲಾಗುತ್ತಿವೆ. ಈ ಭಯದಿಂದಲೇ ಸಚಿವರು ನನಗೆ ಬೇರೆ ಫೋನ್ ಕೊಡಿಸಿದ್ದಾರೆ. ಪಕ್ಷದ ಶಾಸಕರು, ಸಚಿವರ ಮೇಲೆ ಮುಖ್ಯಮಂತ್ರಿಗೆ ನಂಬಿಕೆ ಇಲ್ಲ. ಅವರ ಸಂಪುಟದ ಸಚಿವರು, ಶಾಸಕರು ನನ್ನನ್ನು ಸಂಪರ್ಕಿಸುತ್ತಾರೆ ಎಂದರೆ ನಾನು ಸರ್ಕಾರವನ್ನು ಬೀಳಿಸುತ್ತೇನೆ ಎಂದಲ್ಲ. ಅದು ವ್ಯಕ್ತಿ- ವ್ಯಕ್ತಿಗಳ ನಡುವಿನ ಪ್ರೀತಿ ವಿಶ್ವಾಸವಷ್ಟೇ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.