ರಾಜಕೀಯ ವ್ಯವಸ್ಥೆಯನ್ನು ರಾಜಕಾರಣಿಗಳಾದ ನಾವೇ ಹದಗೆಡಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶನಿವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಇಂದು ಪ್ರೊ.ಕೆ.ಇ.ರಾಧಕೃಷ್ಣ ಅವರ ಸಂಪಾದಿತ ಪಂಪಾಧ್ಯಯನ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ತಮ್ಮ ಆಶಯ ನುಡಿ ಮಂಡಿಸುತ್ತ ಈ ರೀತಿ ಹೇಳಿದರು.
ರಾಜಕೀಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹದಗೆಡಿಸಿದ್ದು, ಇಂದು ಯುವ ಪೀಳಿಗೆ ಸೇರಿದಂತೆ ಯಾರಲ್ಲಿಯೂ ಹೋರಾಟ ಮನೋಭಾವ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದಿನ ರಾಜಕೀಯ ಸನ್ನಿವೇಶ ಹೀಗೆ ಮುಂದುವರಿದಲ್ಲಿ ರಾಮರಾಜ್ಯ ಕಾಣಲು ಸಾಧ್ಯವಿಲ್ಲ ಎಂದ ಅವರು, ಅಶೋಕ ಚಕ್ರವರ್ತಿಯಂತಹ ಮನೋಭಾವ ಬೆಳೆಸಿಕೊಂಡಲ್ಲಿ ಮಾತ್ರ ರಾಜ್ಯ ರಾಮರಾಜ್ಯವಾಗಲು ಸಾಧ್ಯ ಎಂದರು.
ಅಲ್ಲದೇ ಇಂದಿನ ಯುವಕರು ಅಪ್ಪ ಹಾಕಿದ ಆಲದ ಮರದಲ್ಲಿ ಏನಿದೆ ಎನ್ನುತ್ತಾರೆ. ಆದರೆ ಅಪ್ಪ ಹಾಕಿದ ಆಲದ ಮರದಲ್ಲೇ ಶಕ್ತಿ ಮತ್ತು ಫಲ ತುಂಬಿರುತ್ತದೆ. ಹೀಗಾಗಿ ತಾವು ಅಪ್ಪ ಹಾಕಿದ ಆಲದ ಮರದಿಂದಲೇ ತಮ್ಮ ಮುಂದಿನ ರಾಜಕೀಯ ಭವಿಷ್ಯ ಹಸನಾಗಿರುವುದಾಗಿ ಮಾರ್ಮಿಕವಾಗಿ ಹೇಳಿದರು.