ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸ್ನೇಹಿತನ ಪತ್ನಿ ಅತ್ಯಾಚಾರ ಆರೋಪ; ಸಚಿವ ಹಾಲಪ್ಪ ರಾಜೀನಾಮೆ
(Haratalu Halappa | BJP MLA | food and civil supplies minister | Sexual harras)
ಸ್ನೇಹಿತನ ಪತ್ನಿ ಅತ್ಯಾಚಾರ ಆರೋಪ; ಸಚಿವ ಹಾಲಪ್ಪ ರಾಜೀನಾಮೆ
ಬೆಂಗಳೂರು, ಗುರುವಾರ, 6 ಮೇ 2010( 10:17 IST )
ಸ್ನೇಹಿತನ ಪತ್ನಿಯನ್ನು ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪದ ಪತ್ರಿಕಾ ವರದಿ ಹಿನ್ನೆಲೆಯಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹರತಾಳು ಹಾಲಪ್ಪ ಭಾನುವಾರ ಬೆಳಿಗ್ಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಶಿವಮೊಗ್ಗದ ತನ್ನ ಸ್ನೇಹಿತ ಮನೆಯಲ್ಲಿ ಉಳಿದುಕೊಂಡಿದ್ದ ಸಂದರ್ಭದಲ್ಲಿ ಅವರ ಪತ್ನಿಯ ಮೇಲೆ ಸಚಿವರು ಅತ್ಯಾಚಾರ ಎಸಗಿದ್ದಾರೆ ಎಂದು 'ವಿಜಯ ಕರ್ನಾಟಕ' ಪತ್ರಿಕೆ ತನಿಖಾ ವರದಿ ಪ್ರಕಟಿಸಿತ್ತು. ಈ ಆರೋಪಗಳ ಹಿನ್ನೆಲೆಯಲ್ಲಿ ಪಕ್ಷಕ್ಕೆ ಮುಜುಗರವಾಗಬಾರದೆಂದು ತಾನು ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹಾಲಪ್ಪ ಪ್ರಕಟಿಸಿದ್ದಾರೆ.
ರಕ್ತದೊತ್ತಡ ಕುಸಿದಿದೆ ಅಂದಿದ್ದರಂತೆ.. ನಾಲ್ಕು ತಿಂಗಳ ಹಿಂದೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹಾಲಪ್ಪ ಶಿವಮೊಗ್ಗ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಶಿವಮೊಗ್ಗದಲ್ಲಿ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಸಚಿವರು ಸಂಜೆಯಾಗುತ್ತಿದ್ದಂತೆ ವೃತ್ತಿಯಲ್ಲಿ ಫೈನಾನ್ಸಿಯರ್ ಆಗಿರುವ ತನ್ನದೇ ಸಮುದಾಯದ ಗೆಳೆಯನಿಗೆ ಫೋನ್ ಮಾಡಿ, ರಾತ್ರಿ ಊಟಕ್ಕೆ ಮನೆಗೆ ಬರುತ್ತೇನೆ ಎಂದು ಹೇಳಿದ್ದರು.
ಅದರಂತೆ ಸಂಜೆ ಶಿವಮೊಗ್ಗದ ವಿನೋಭಾನಗರದ ಗೆಳೆಯನ ನಿವಾಸಕ್ಕೆ ಸಚಿವರು ತೆರಳಿದ್ದರು. ಕುಟುಂಬದೊಂದಿಗೆ ಊಟ ಮಾಡಿದ ನಂತರ, ರಾತ್ರಿಯಾಯಿತು; ನಾನು ಇಲ್ಲೇ ಮಲಗುತ್ತೇನೆ. ನಾಳೆ ಹೋಗುತ್ತೇನೆ. ಹೇಗೂ ಮಹಡಿ ಮೇಲೆ ಕೊಠಡಿ ಇದೆಯಲ್ಲ ಎಂದು ಹೇಳಿದ್ದರು.
ಸಚಿವರು ತನ್ನ ಮನೆಯಲ್ಲೇ ಉಳಿಯುತ್ತಾರೆ ಎಂಬ ಸಂಗತಿಯಿಂದ ಸಂತಸಗೊಂಡ ಗೆಳೆಯ, ಹಾಲಪ್ಪನವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ.
ಆದರೆ ನಡು ರಾತ್ರಿ ವೇಳೆಗೆ ಇದ್ದಕ್ಕಿದ್ದಂತೆ ಮೇಲಿನ ಮಹಡಿಯಿಂದ ಕೂಗಿಕೊಳ್ಳಲಾರಂಭಿಸಿದ ಸಚಿವರು, ತನಗೆ ಎದೆನೋವಾಗುತ್ತಿದೆ, ರಕ್ತದೊತ್ತಡ ತೀವ್ರ ಕುಸಿತವಾಗಿದೆ; ಐ.ಬಿ.ಯಲ್ಲಿ (ಪ್ರವಾಸಿ ಮಂದಿರ) ಇದಕ್ಕೆ ಸಂಬಂಧಪಟ್ಟ ಮಾತ್ರೆಗಳಿವೆ. ಅಲ್ಲಿ ನನ್ನ ಅಂಗರಕ್ಷಕ ಮತ್ತು ಕಾರು ಚಾಲಕ ಇದ್ದಾರೆ. ಅವರನ್ನು ಕೇಳಿದರೆ ಮಾತ್ರೆ ಕೊಡುತ್ತಾರೆ, ತಕ್ಷಣ ತೆಗೆದುಕೊಂಡು ಬಾ ಎಂದು ಗೆಳೆಯನಿಗೆ ಹೇಳಿದ್ದರು.
ಅದರಂತೆ ಸ್ನೇಹಿತ ಮನೆಯಿಂದ ಮಧ್ಯರಾತ್ರಿಯೇ ಐ.ಬಿ.ಗೆ ಹೋದರು. ಅಲ್ಲಿ ಹೋದಾಗ ಯಾರೂ ಇರಲಿಲ್ಲ. ಇನ್ನು ಸಚಿವರನ್ನು ಆಸ್ಪತ್ರೆಗೆ ಸಾಗಿಸುವುದೇ ಉತ್ತಮ ಎಂದುಕೊಂಡು ಮನೆಗೆ ಮರಳಿದಾಗ ಅಲ್ಲಿ ಕಂಡ ದೃಶ್ಯವೇ ಬೇರೆಯಾಗಿತ್ತು.
ಸ್ವತಃ ಗೆಳೆಯನ ಪತ್ನಿಯ ಮಾನಭಂಗ ನಡೆಸಿದ್ದ ಸಚಿವರು ಅರೆನಗ್ನ ಸ್ಥಿತಿಯಲ್ಲಿದ್ದರೆ, ಮಹಿಳೆ ಅಳುತ್ತಿದ್ದರು. ಈ ಹೊತ್ತಿನಲ್ಲಿ ಆಘಾತಕ್ಕೊಳಗಾದ ಗೆಳೆಯನಿಗೆ ಸಚಿವರು ಸಮಾಜಾಯಿಷಿ ನೀಡಲು ಯತ್ನಿಸಿ ಕೊನೆಗೆ ಜೀವ ಬೆದರಿಕೆಯನ್ನೂ ಹಾಕಿದ್ದರು. ಇವೆಲ್ಲದರ ನಡುವೆಯೂ ಸಚಿವರ ಅರೆ ನಗ್ನಾವಸ್ಥೆ ಮತ್ತು ಪತ್ನಿಯ ಅವಸ್ಥೆಯನ್ನು ಗೆಳೆಯ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಣ ನಡೆಸಿದ್ದರು.
ಇದಾದ ನಂತರ ಸಚಿವ ಹಾಲಪ್ಪನವರಿಗೆ ಗೆಳೆಯ ಥಳಿಸಿದ್ದಾರೆ. ಆದರೆ ಈ ವಿಚಾರವನ್ನು ಬಹಿರಂಗಪಡಿಸಿದಲ್ಲಿ ನಾನು ಜೀವಂತ ಉಳಿಯಲಾರೆ ಎಂದು ಸಚಿವರು ಈ ಸಂದರ್ಭದಲ್ಲಿ ಗೆಳೆಯನಿಗೆ ಹೇಳಿದ್ದರು. ಗೆಳೆಯನ ಪತ್ನಿಗೂ ಜೀವ ಬೆದರಿಕೆ ಹಾಕಿದ್ದರು ಎಂದು ಪತ್ರಿಕೆ ವರದಿ ಮಾಡಿದೆ.
ಆದರೆ ಪತ್ರಿಕೆ ಎಲ್ಲೂ ಸಚಿವರ ಹೆಸರು ಅಥವಾ ಅವರ ಖಾತೆಯನ್ನು ನೇರವಾಗಿ ಪ್ರಸ್ತಾಪಿಸಿರಲಿಲ್ಲ.
ಇದು ರಾಜಕೀಯ ಪಿತೂರಿ... ಪತ್ರಿಕೆ ಇಂದು ಬೆಳಿಗ್ಗೆ ಮಾರುಕಟ್ಟೆಗೆ ಬರುತ್ತಿದ್ದಂತೆ ದಂಗಾದ ಸಚಿವರು ಬೆಳಿಗ್ಗೆ 8.30ರ ಹೊತ್ತಿಗೆ ಬೆಂಗಳೂರಿನ ಬಸವೇಶ್ವರ ನಗರದ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಪ್ರಕಟಿಸಿದ್ದಾರೆ.
ಪಕ್ಷದ ವರ್ಚಸ್ಸಿಗೆ ಧಕ್ಕೆ ಬಾರದೆಂಬ ಉದ್ದೇಶದಿಂದ ಯಾರದೇ ಒತ್ತಡವಿಲ್ಲದೆ ರಾಜೀನಾಮೆ ನೀಡುತ್ತಿದ್ದೇನೆ. ರಾಜೀನಾಮೆ ಪತ್ರವನ್ನು ಈಗಾಗಲೇ ಮುಖ್ಯಮಂತ್ರಿಯವರ ಕಚೇರಿಗೆ ರವಾನಿಸಿದ್ದೇನೆ ಎಂದು ಹಾಲಪ್ಪ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಅವರು, ಇದು ರಾಜಕೀಯ ವಿರೋಧಿಗಳಿಂದ ನಡೆದಿರುವ ವ್ಯವಸ್ಥಿತ ಪಿತೂರಿ. ಮುಖ್ಯಮಂತ್ರಿಗಳು, ಸಚಿವರು ಪಕ್ಷದ ಅಧ್ಯಕ್ಷರು ಮತ್ತು ಇತರ ನಾಯಕರಿಗೆ ಮುಜುಗರವಾಗಬಾರದು ಮತ್ತು ಕಾರ್ಯಕರ್ತರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ನಾನು ರಾಜೀನಾಮೆಗೆ ಮುಂದಾಗಿದ್ದೇನೆ. ಮುಂದಿನ ದಿನಗಳಲ್ಲಿ ಸತ್ಯ ಹೊರ ಬೀಳಲಿದೆ ಎಂದಿದ್ದಾರೆ.
ನಮ್ಮದೇ ಪಕ್ಷದ ಕೆಲವು ಮಂದಿ, ವಿರೋಧ ಪಕ್ಷಗಳ ಕೆಲವರು ಸೇರಿಕೊಂಡು ನಡೆಸಿರುವ ಪಿತೂರಿ ಇದಾಗಿದೆ. ನನಗೆ ಫೈನಾನ್ಸಿಯರ್ ಗೆಳೆಯರೇ ಇಲ್ಲ. ನನ್ನ ರಾಜಕೀಯ ಜೀವನವನ್ನು ಮುಗಿಸುವ ಉದ್ದೇಶದಿಂದ ನಡೆಸಲಾದ ಸಂಚು ಇದು. ಪತ್ರಿಕಾ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಪತ್ರಿಕೆ ಇದನ್ನು ವಾರಗಟ್ಟಲೆ ಕೂತು ಮಾಡಿದ ವರದಿಯಂತಿದೆ. ಹಾಗೇನಾದರೂ ನಡೆಯುತ್ತಿದ್ದರೆ ಮೊದಲು ವಿದ್ಯುನ್ಮಾನ ಮಾಧ್ಯಮಗಳು ಮೊದಲು ವರದಿ ಮಾಡುತ್ತಿದ್ದವು. ಎಲ್ಲವೂ ತನಿಖೆಯ ನಂತರ ಬಹಿರಂಗವಾಗಲಿದೆ ಎಂದು ಸಚಿವರು ತನ್ನನ್ನು ಸಮರ್ಥಿಸಿಕೊಂಡಿದ್ದಾರೆ.