ತಮಿಳುನಾಡು ರಾಜ್ಯ ಸರಕಾರವು ಕನ್ನಡ ಭಾಷಾ ಕಲಿಕೆಯ ಮೇಲೆ ಹೇರಿರುವ ನಿಷೇಧ ಆದೇಶ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಈ ಸಂಬಂಧ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಶನಿವಾರ ತನ್ನ ನಿವಾಸದಲ್ಲಿ ಮಾತನಾಡುತ್ತಿದ್ದ ಅವರು, ತಮಿಳುನಾಡು ಸರಕಾರ ಕನ್ನಡ ಕಲಿಕೆಗೆ ಹೇರಿರುವ ನಿಷೇಧ ಸರಿಯಲ್ಲ. ಈ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಅಲ್ಲಿನ ಕನ್ನಡ ಮಕ್ಕಳಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ತಮಿಳುನಾಡಿನ ಕನ್ನಡ ಕಲಿಯುವ ಮಕ್ಕಳು ಮತ್ತು ಶಿಕ್ಷಕರ ರಕ್ಷಣೆ ನಾವು ಬದ್ಧರಾಗಿದ್ದೇವೆ. ತಮಿಳುನಾಡು ಸರಕಾರದ ಈ ಕ್ರಮಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ. ಅಧಿಕೃತವಾಗಿ ಮಾಹಿತಿಯೂ ಇಲ್ಲ. ನನಗೆ ಮಾಧ್ಯಮಗಳ ಮೂಲಕವಷ್ಟೇ ತಿಳಿದಿದೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಶೀಘ್ರದಲ್ಲೇ ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಅಲ್ಲಿನ ಸರಕಾರ ಕನ್ನಡ ಕಲಿಕೆಗೆ ನಿಷೇಧ ಹೇರಿರುವುದು ಸರ್ವಥಾ ಸರಿಯಲ್ಲ. ಅಲ್ಲಿ ಕನ್ನಡ ಕಲಿಸಲೆಂದು ಕರ್ನಾಟಕ ರಾಜ್ಯ ಸರಕಾರ 50 ಕೋಟಿ ರೂಪಾಯಿ ಮೀಸಲಿಟ್ಟಿದೆ. ಆ ಹಣವನ್ನು ತಮಿಳುನಾಡಿನ ಕನ್ನಡ ಶಾಲೆಗಳ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.
ತಮಿಳು ಶಾಲೆ ಬಂದ್... ಕನ್ನಡ ಶಾಲೆಗಳನ್ನು ಮುಚ್ಚುವ ತಮಿಳುನಾಡು ಸರಕಾರದ ಆದೇಶ ಹಿಂದಕ್ಕೆ ಪಡೆಯದೇ ಇದ್ದಲ್ಲಿ ರಾಜ್ಯದಲ್ಲಿರುವ ತಮಿಳು ಶಾಲೆಗಳನ್ನು ಬಂದ್ ಮಾಡಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಎಚ್ಚರಿಕೆ ರವಾನಿಸಿದ್ದಾರೆ.
ಕೃಷ್ಣಗಿರಿ, ಈರೋಡ್, ಹೊಸೂರು, ಚೆನ್ನೈ ಸೇರಿದಂತೆ ತಮಿಳುನಾಡಿನಾದ್ಯಂತ ಸುಮಾರು 64 ಕನ್ನಡ ಶಾಲೆಗಳಿದ್ದು, ಅವುಗಳನ್ನು ಸರಕಾರ ಮುಚ್ಚಲು ಉದ್ದೇಶಿಸಿದೆ. ಪರಿಣಾಮ ಕನ್ನಡಿಗರು ಅನಿವಾರ್ಯವಾಗಿ ತಮಿಳನ್ನೇ ಕಲಿಯಬೇಕಾಗುತ್ತದೆ. ಹಾಗಾಗಲು ನಾವು ಅವಕಾಶ ನೀಡುವುದಿಲ್ಲ ಎಂದು ಗೌಡ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಎಷ್ಟು ತಮಿಳು ಶಾಲೆಗಳಿವೆ ಎಂಬುದನ್ನು ಮೊದಲು ತಮಿಳುನಾಡು ಅರ್ಥ ಮಾಡಿಕೊಳ್ಳಲಿ. ನಮ್ಮ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಹಿಂದಕ್ಕೆ ಪಡೆಯದೇ ಇದ್ದರೆ ರಾಜ್ಯದ ತಮಿಳು ಶಾಲೆಗಳನ್ನು ಖಂಡಿತಾ ಮುಚ್ಚುತ್ತೇವೆ ಎಂದು ಇದೇ ಸಂದರ್ಭದಲ್ಲಿ ಅವರು ಪಕ್ಕದ ರಾಜ್ಯವನ್ನು ಎಚ್ಚರಿಸಿದ್ದಾರೆ.