ಭ್ರಷ್ಟ ಆರ್‌ಟಿಒ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಿರುವ ಸರಕಾರ
ಬೆಂಗಳೂರು, ಭಾನುವಾರ, 2 ಮೇ 2010( 15:31 IST )
ಭ್ರಷ್ಟ ಅಧಿಕಾರಿಗಳನ್ನು ಮಟ್ಟ ಹಾಕಲು ಕೊನೆಗೂ ಸರಕಾರ ಮುಂದಾಗಿದೆ. ರಾಜ್ಯದ ಎಲ್ಲಾ ಭಾಗದಲ್ಲಿರುವ ಆರ್‌ಟಿಒ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ನಿರ್ಧರಿಸಿದೆ.
ಹೌದು, ಮೂರು ವರ್ಷದಿಂದ ಒಂದೇ ಕಡೆ ಕಾರ್ಯ ನಿರ್ವಹಿಸುತ್ತಿರುವ ಆರ್‌ಟಿಒ ಅಕಾರಿಗಳನ್ನು ಈ ವರ್ಷ ವರ್ಗಾಯಿಸಲಾಗುವುದು ಎಂದು ಸಚಿವ ಆರ್. ಅಶೋಕ್ ಹೇಳುವ ಮೂಲಕ ಆರ್‌ಟಿಒ ಅಧಿಕಾರಿಗಳಲ್ಲಿ ಒಂದು ಭಯ ಹುಟ್ಟಿಸಿದ್ದಾರೆ.
ಆರ್‌ಟಿಒ ಇಲಾಖೆಯಲ್ಲಿ ಅಕ್ರಮ ಹೆಚ್ಚಾಗಿದೆ. ಇದನ್ನು ತಡೆಯಲು ಇದಕ್ಕಿಂತ ಉತ್ತಮ ಮಾರ್ಗ ಬೇರೆ ಇಲ್ಲ. ಸಾರಿಗೆ ಇಲಾಖೆಯಲ್ಲಿ ಅಕ್ರಮ ಹೆಚ್ಚಾಗಿರುವ ಬಗ್ಗೆ ಇತ್ತೀಚೆಗೆ ಲೋಕಾಯುಕ್ತರೂ ಆತಂಕ ವ್ಯಕ್ತಪಡಿಸಿದ್ದಾರೆ. ಆರ್‌ಟಿಒ ಅಧಿಕಾರಿಗಳು ಒಂದೇ ಕಡೆ ಕಾರ್ಯನಿರ್ವಹಿಸಿದರೆ ಅಕ್ರಮ ಎಸಗಲು ಅವಕಾಶ ಲಭಿಸುತ್ತದೆ. ಇವರನ್ನೇ ಬದಲಾಯಿಸುತ್ತಿದ್ದರೆ, ಸಮಸ್ಯೆ ಬಗೆಹರಿಯಬಹುದು. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಶೀಘ್ರ ತೀರ್ಮಾನ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಭ್ರಷ್ಟಾಚಾರ ತಡೆಗೆ ರಾಜ್ಯದ ಎಲ್ಲಾ ಆರ್‌ಟಿಒ ಕಚೇರಿಯನ್ನೂ ಗಣಕೀಕೃತಗೊಳಿಸಲು ತೀರ್ಮಾನಿಸಲಾಗಿದೆ. ಹಂತ ಹಂತವಾಗಿ ಈ ಪ್ರಕ್ರಿಯೆಯೂ ನಡೆಯಲಿದೆ. ಆರ್ಟಿಒ ಕಚೇರಿ ಅಕ್ರಮ ತಡೆಗೆ ಇನ್ನಷ್ಟು ವ್ಯವಸ್ಥೆಯನ್ನು ಶೀಘ್ರವೇ ಜಾರಿಗೆ ತರಲಾಗುವುದು ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಅವರು ಕಾರ್ಮಿಕ ಪ್ರೀತಿಯನ್ನು ಸಹ ವ್ಯಕ್ತಪಡಿಸಿದರು. ಅವರು ಹೇಳಿದಂತೆ ಬಿಎಂಟಿಸಿಗೆ ಸಾವಿರ ಸಿಬ್ಬಂದಿ ನೇಮಕ ಆಗಲಿದೆ. ಬಿಬಿಎಂಪಿ ನೌಕರರಿಗೆ ವಿಮಾ ಸೌಲಭ್ಯ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.