ಆರ್ಎಸ್ಎಸ್ ಕೈಗೊಂಬೆಯಂತೆ ವರ್ತಿಸುತ್ತಿರುವ ಆಡಳಿತಾರೂಢ ಬಿಜೆಪಿ ಸರ್ಕಾರ ದಲಿತರನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡುತ್ತಿದೆ ಎಂದು ಲೋಕಜನಶಕ್ತಿ ರಾಷ್ಟ್ರೀಯ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ದೂರಿದ್ದಾರೆ.
ಅವರು ಭಾನುವಾರ ನಗರದಲ್ಲಿ ಲೋಕಜನಶಕ್ತಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಮತ್ತು ಬಿಜೆಪಿ ಮುಖಂಡರು ದಲಿತ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಅದಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ನೀಡಿದ ಹೇಳಿಕೆಯೂ ಸಾಕ್ಷಿಯಾಗಿದೆ ಎಂದರು.
ಪರಿಶಿಷ್ಟರನ್ನು ಹರಿಜನ ಎಂದು ಕರೆಯುವುದು ಸರಿಯಲ್ಲ, ದೇವಾಲಯಗಳಲ್ಲಿ ಕೆಲಸ ಮಾಡುವ, ತಂದೆ ಯಾರೆಂದು ಗೊತ್ತಿಲ್ಲದವರನ್ನು ಹರಿಜನ ಎಂದು ಸಂಭೋಧಿಸುತ್ತಾರೆಂದು ಮೋದಿ ಹೇಳಿದ್ದರು. ಹಾಗಾಗಿ ಮೋದಿ ಹೇಳಿಕೆ ವಿರುದ್ಧ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಪಾಸ್ವಾನ್ ತಿಳಿಸಿದರು.
ದಲಿತರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ದೊಡ್ಡ ನೌಕರಿಯನ್ನು ಪಡೆಯಲು ಶ್ರಮಿಸಬೇಕು ಎಂದು ಕರೆ ನೀಡಿದ ಅವರು, ಸಂಘರ್ಷದಿಂದ ಮಾತ್ರವೇ ದಲಿತ ಸಮುದಾಯ ಏಳಿಗೆ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.