ತಮ್ಮ ವಿರುದ್ಧ ಹೊರಿಸಲಾಗಿರುವ ಅತ್ಯಾಚಾರ ಪ್ರಕರಣದ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಕೈವಾಡವಿದೆ ಎಂದು ಮಾಜಿ ಸಚಿವ ಹರತಾಳ ಹಾಲಪ್ಪ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಕೆಲವು ಶಾಸಕರು ಅದರಲ್ಲೂ ವಿಶೇಷವಾಗಿ ಸಚಿವ ಸ್ಥಾನದ ಪ್ರಯತ್ನದಲ್ಲಿರುವ ಹಲವರು ಹಾಗೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಕುಟುಂಬ ತಮ್ಮ ವಿರುದ್ಧ ನಡೆಸಿರುವ ವ್ಯವಸ್ಥಿತ ಪಿತೂರಿ ಇದು ಎಂದು ದೂರಿದ್ದಾರೆ.
ಈ ಬಗ್ಗೆ ನನ್ನ ಮೇಲಿನ ಆರೋಪ ಸಾಬೀತಾದರೆ ಜೈಲಿಗೆ ಹೋಗಲು ಸಿದ್ಧ. ಶಿವಮೊಗ್ಗದಲ್ಲಿ ನಾನು ಯಾವುದೇ ಸ್ನೇಹಿತನ ಮನೆಯಲ್ಲಿ ಮಲಗಿಲ್ಲ. ಅಂಥ ಘಟನೆ ನಡದೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಮ್ಮ ಕುಟುಂಬದ ಕೈವಾಡವಿಲ್ಲ-ಮಧು ಬಂಗಾರಪ್ಪ: ಇದೇ ವೇಳೆ ಹಾಲಪ್ಪ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮಧು ಬಂಗಾರಪ್ಪ, ಈ ಪ್ರಕರಣದ ಹಿಂದೆ ನಮ್ಮ ಕುಟುಂಬದ ಯಾವುದೇ ಕೈವಾಡವಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಆರೋಪ ಹೊರಿಸಿರುವ ವೆಂಕಟೇಶ್ ಕುಟುಂಬ ಕೂಡ ನಮಗೆ ಆತ್ಮೀಯರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ತಂದೆಯಾಗಲಿ ಅಥವಾ ಕುಟುಂಬವಾಗಲಿ ಯಾವತ್ತೂ ಇಂಥ ಕೀಳು ಮಟ್ಟ ರಾಜಕಾರಣ ಮಾಡಿಲ್ಲ ಎಂದಿರುವ ಅವರು ಒಂದು ವೇಳೆ ನಮ್ಮ ಕುಟುಂಬವನ್ನು ಅನಾವಶ್ಯಕವಾಗಿ ಪ್ರಕರಣದಲ್ಲಿ ಎಳೆದರೆ ಸುಮ್ಮನೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.