ಹೊಗೇನಕಲ್ ಪ್ರದೇಶವನ್ನು ತಮಿಳುನಾಡು ಸರ್ಕಾರ ಕಬಳಿಸುತ್ತಿದ್ದರೂ ರಾಜ್ಯದ ಸಂಸದರು ಮೌನ ವಹಿಸಿರುವುದನ್ನು ಪ್ರತಿಭಟಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದೆ.
ನಗರದಲ್ಲಿ ಇಂದು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರ ನೇತೃತ್ವದಲ್ಲಿ ಮಹಿಳಾ ಘಟಕದ ಮುಖಂಡರು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಕ್ಷಣವೇ ಮಧ್ಯ ಪ್ರವೇಶಿಸಿ ತಡೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣ ಗೌಡ, ತಮಿಳುನಾಡು ಸರ್ಕಾರ ಅಕ್ರಮವಾಗಿ ನೀರಾವರಿ ಯೋಜನೆಯನ್ನು ಮುಂದುವರಿಸುತ್ತಿದೆ. ಆದರೂ ರಾಜ್ಯದ ಸಂಸದರು ಹಾಗೂ ರಾಜ್ಯದವರೇ ಆದ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ, ಕಾನೂನು ತಜ್ಞ, ಡಿ.ಬಿ. ಚಂದ್ರಗೌಡ, ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್ ಮೌನ ವಹಿಸಿದ್ದಾರೆ ಎಂದು ದೂರಿದ್ದಾರೆ.
ಹೊಗೇನಕಲ್ ಪ್ರದೇಶ ಒತ್ತುವರಿ ಮಾಡುವ ಕೃತ್ಯವನ್ನು ತಮಿಳುನಾಡು ಸರ್ಕಾರ ತೀವ್ರಗತಿಯಲ್ಲಿ ನಡೆಸಿದೆ. ಆ ರಾಜ್ಯದ ಮುಖ್ಯಮಂತ್ರಿ ಕರುಣಾನಿಧಿ ಅವರು ಮುಂಗಡ ಪತ್ರದಲ್ಲಿ ಯೋಜನೆಗೆ 400 ಕೋಟಿ ರೂ. ಮೀಸಲಿಟ್ಟು ಕೇಂದ್ರದ ನೆರವಿನೊಂದಿಗೆ ಜಪಾನ್ನಿಂದ ಸಾಲ ಪಡೆದು ಯೋಜನೆ ಪ್ರಾರಂಭಿಸಿದೆ. ಇದನ್ನು ಯಾವುದೇ ಕಾರಣಕ್ಕೂ ನಡೆಸಲು ಬಿಡುವುದಿಲ್ಲ ಎಂದು ಆಕ್ರೌಶ ವ್ಯಕ್ತಪಡಿಸಿದ್ದಾರೆ.