ತನ್ನ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ಸರಕಾರ ಸಿಐಡಿ ತನಿಖೆಗೆ ವಹಿಸುತ್ತಿದ್ದಂತೆ ಮಾಜಿ ಸಚಿವ ಹರತಾಳು ಹಾಲಪ್ಪ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಮಾಧ್ಯಮಗಳು ಸೇರಿದಂತೆ ಯಾರೊಬ್ಬರಿಗೂ ಕಾಣದಂತೆ ಮಾಯವಾಗಿದ್ದಾರೆ.
ನಿನ್ನೆ ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿದ ನಂತರ ಸ್ನೇಹಿತ ಪತ್ನಿಯನ್ನು ಅತ್ಯಾಚಾರ ಮಾಡಿದ ಆರೋಪ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದರು. ಅದಕ್ಕೂ ಮೊದಲು ಮುಖ್ಯಮಂತ್ರಿಯವರನ್ನು ಹಾಲಪ್ಪನವರು ಭೇಟಿಯಾಗಿದ್ದರು. ಇದಾದ ನಂತರ ಬಹುತೇಕ ಎಲ್ಲರ ಸಂಪರ್ಕ ಕಡಿದುಕೊಂಡಿರುವ ಹಾಲಪ್ಪ ಭೂಗತರಾಗಿದ್ದಾರೆ.
NRB
ಇತ್ತ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗಿರುವ ಸ್ನೇಹಿತ ವೆಂಕಟೇಶ್ ಮೂರ್ತಿಯವರ ಎರಡನೇ ಪತ್ನಿ ಚಂದ್ರಾವತಿಯವರು ಶಿವಮೊಗ್ಗದ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಚಿವರ ಮೇಲೆ ಐಪಿಸಿ 341, 342, 376, 506 ಮತ್ತು 34ರ ಅಡಿಯಲ್ಲಿ ಅತ್ಯಾಚಾರ, ಪ್ರಾಣ ಬೆದರಿ, ಅಕ್ರಮ ಬಂಧನ ಮುಂತಾದ ಪ್ರಕರಣಗಳನ್ನು ದಾಖಲಿಸಲಾಗಿದೆ.
ಇದೇ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗುವ ಸಾಧ್ಯತೆಗಳಿರುವುದರಿಂದ ರಾಜ್ಯ ಬಿಜೆಪಿ ನಾಯಕರು, ಮುಖ್ಯಮಂತ್ರಿ ಮತ್ತು ಕಾನೂನು ತಜ್ಞರ ಸಲಹೆಯಂತೆ ಹಾಲಪ್ಪನವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.
ಅವರೀಗ ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಮೊಬೈಲ್‌ಗಳು ಸ್ವಿಚ್ ಆಫ್ ಸಂದೇಶ ರವಾನಿಸುತ್ತಿವೆ. ಆರೋಪ ಬಂದ ದಿನ ಕೇವಲ ಎರಡು ಗಂಟೆಯೊಳಗೆ ರಾಜೀನಾಮೆ ಸಲ್ಲಿಸಿ ಪತ್ರಕರ್ತರೊಂದಿಗೆ ಮಾತಿಗೆ ಕೂತದ್ದಲ್ಲದೆ, ಅಂದೇ ವಾರ್ತಾ ವಾಹಿನಿಯೊಂದರ ಸ್ಟುಡಿಯೋಗೆ ತೆರಳಿ ಸಂದರ್ಶನ ನೀಡಿದ್ದ ಸಚಿವರೀಗ ಯಾವ ಮಾಧ್ಯಮದ ಪ್ರತಿನಿಧಿಗಳಿಗೂ ಮಾತಿಗೆ ಸಿಗುತ್ತಿಲ್ಲ.
ಮೂಲಗಳ ಪ್ರಕಾರ ಹಾಲಪ್ಪನವರು ಕಾನೂನು ತಜ್ಞರೊಂದಿಗೆ ಮಾತುಕತೆ ನಡೆಸಿದ್ದಾರೆ. ಅದರಂತೆ ಶಿವಮೊಗ್ಗ ಸೆಷನ್ಸ್ ಕೋರ್ಟ್‌ನಲ್ಲಿ ಇಂದು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಸೆಕ್ಷನ್ 438ರ ಅಡಿಯಲ್ಲಿ ಅವರು ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.