ಮಾಜಿ ಸಚಿವ ಹರತಾಳು ಹಾಲಪ್ಪ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣವನ್ನು ಯಾವುದೇ ಕಾರಣಕ್ಕೂ ಸಿಬಿಐಗೆ ಒಪ್ಪಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯದ ಸಿಐಡಿ ಪೊಲೀಸರ ಮೇಲೆ ಪೂರ್ಣ ವಿಶ್ವಾಸ ಇರುವುದಾಗಿ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಈಗಾಗಲೇ ಸಿಐಡಿಗೆ ಒಪ್ಪಿಸಲಾಗಿದೆ. ರಾಜ್ಯದ ಪೊಲೀಸರ ಮೇಲೆ ನಮಗೆ ನಂಬಿಕೆ ಇದೆ. ಅವರು ಪೂರ್ಣವಾಗಿ ತನಿಖೆ ನಡೆಸಿ, ಸತ್ಯಾಂಶವನ್ನು ಬಯಲಿಗೆಳೆಯುತ್ತಾರೆ ಎಂದರು. ಆದರೆ ಯಾವುದೇ ಕಾರಣಕ್ಕೂ ಸಿಬಿಐ ತನಿಖೆಗೆ ಒಪ್ಪಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಲದೇ ತಾನು ಅಧಿಕಾರದ ಗದ್ದುಗೆ ಏರಿದ ದಿನದಿಂದಲೇ ಪ್ರತಿಪಕ್ಷಗಳು ತನ್ನ ರಾಜೀನಾಮೆಗೆ ಒತ್ತಾಯಿಸುತ್ತಲೇ ಬಂದಿದೆ. ತಾನು ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದರು.
ಪ್ರತಿಪಕ್ಷಗಳು ಅನಾವಶ್ಯಕವಾಗಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ರಾಜ್ಯದ ಅಭಿವೃದ್ದಿಯನ್ನು ಸಹಿಸದ ವಿರೋಧ ಪಕ್ಷಗಳು ದುರುದ್ದೇಶದಿಂದಲೇ ಆಡಳಿತಾರೂಢ ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುವ ಕೆಲಸದಲ್ಲಿ ಮಗ್ನವಾಗಿರುವುದಾಗಿ ಈ ಸಂದರ್ಭದಲ್ಲಿ ಆರೋಪಿಸಿದರು.