ರೆಡ್ಡಿ ಸಹೋದರರ ಕೈಗೊಂಬೆಯಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವರ್ತಿಸುತ್ತಿರುವುದಾಗಿ ಆರೋಪಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಗಣಿ ರೆಡ್ಡಿಗಳಿಗೆ ಕರವೇಯಿಂದ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದರು.
ಮಂಗಳವಾರ ನಗರದಲ್ಲಿ ನಡೆದ ಕರವೇ ನಲ್ನುಡಿ ಮಾಸಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗಣಿಗಾರಿಕೆ ವಿರುದ್ಧ ಮೌಖಿಕ ಹೋರಾಟ ನಡೆಸುತ್ತಿರುವವರ ಜೊತೆ ಕೈಜೋಡಿಸಿ ಹೋರಾಟ ನಡೆಸುವುದಾಗಿ ಘೋಷಿಸಿದರು.
ರಾಜ್ಯದಲ್ಲಿ ಇಡೀ ಸರ್ಕಾರವನ್ನು ರೆಡ್ಡಿ ಬ್ರದರ್ಸ್ ತಮ್ಮ ಹಿಡಿತದಲ್ಲಿಟ್ಟುಕೊಂಡು ಅಕ್ರಮ ಗಣಿಗಾರಿಕೆ, ಗೂಂಡಾಗಿರಿ ನಡೆಸುತ್ತಿರುವುದಾಗಿ ಆರೋಪಿಸಿದ ಗೌಡ, ಬಳ್ಳಾರಿಯಲ್ಲಿ ಲಾಡ್ ಮತ್ತು ರೆಡ್ಡಿಗಳನ್ನು ನಿಯಂತ್ರಿಸುವ ಕೆಲಸವನ್ನು ಕರವೇ ಮಾಡಲಿದೆ ಎಂದು ಗುಡುಗಿದರು.
ತನ್ನ ವಿರುದ್ಧವೇ 48ಕ್ರಿಮಿನಲ್ ಮೊಕದ್ದಮೆಗಳಿವೆ. ಕರವೇ ವಿರುದ್ಧ ಸುಮಾರು 1330 ಪ್ರಕರಣಗಳು ದಾಖಲಾಗಿವೆ. ಕನ್ನಡಕ್ಕಾಗಿ ಹೋರಾಡಿದ ಫಲವೆಂದರೆ ಆಡಳಿತಾರೂಢ ಸರ್ಕಾರಗಳು ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದಾಗಿ ದೂರಿದರು. ಅದೇ ಮೊಕದ್ದಮೆಯನ್ನು ಸರ್ಕಾರದೊಳಗಿರುವ ಕ್ರಿಮಿನಲ್‌ಗಳು ಮಾಡಿದಾಗ ಅವರ ವಿರುದ್ಧ ಏನೂ ದೂರು ದಾಖಲಿಸದೆ ರಕ್ಷಣೆ ನೀಡಲು ಮುಂದಾಗುತ್ತಾರೆ. ಇದ್ಯಾವ ನ್ಯಾಯ ಎಂದು ಈ ಸಂದರ್ಭದಲ್ಲಿ ಪ್ರಶ್ನಿಸಿದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಯು.ಆರ್.ಅನಂತಮೂರ್ತಿ, ಗಣಿಗಾರಿಕೆಯನ್ನು ಕೂಡಲೇ ನಿಷೇಧಿಸಬೇಕು. ಒಂದು ವೇಳೆ ಗಣಿಗಾರಿಕೆ ಅನಿವಾರ್ಯತೆ ಇರುವುದಾದಲ್ಲಿ ಸರ್ಕಾರವೇ ಅದನ್ನು ನಡೆಸುವಂತಾಗಬೇಕು ಎಂದು ಸಲಹೆ ನೀಡಿದರು.