ರಾಜ್ಯ ರಾಜಕಾರಣದಲ್ಲಿ ತೀವ್ರ ಕೋಲಾಹಲವೆಬ್ಬಿಸಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಪ್ರಕರಣದ ಬಿಸಿ ಆರುವ ಮುನ್ನವೇ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪುತ್ರನೊಬ್ಬ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ನಾಪತ್ತೆಯಾಗಿರುವ ಘಟನೆ ಮತ್ತೊಂದು ರಾಜಕೀಯ ಕೆಸರೆರಚಾಟಕ್ಕೆ ನಾಂದಿ ಹಾಡಿದೆ.
ರಾಯಚೂರಿನ ಲಿಂಗಸುಗುರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಮೇಟಿ ಪುತ್ರ ದೇವರೆಡ್ಡಿ ಎಂಬಾತ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ನಾಪತ್ತೆಯಾಗಿರುವ ಪ್ರಕರಣದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರೊಂದಿಗೆ ಆಡಳಿತಾರೂಢ ಬಿಜೆಪಿಯ ಹಾಲಪ್ಪ ಅವರು ನಡೆಸಿದ್ದರೆನ್ನಲಾದ ಅತ್ಯಾಚಾರ ಪ್ರಕರಣದ ಬಗ್ಗೆ ಬೊಬ್ಬೆ ಹೊಡೆಯುತ್ತಿದ್ದ ಕಾಂಗ್ರೆಸ್ ನಾಯಕರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸುವ ಸಾಧ್ಯತೆ ಇದೆ.
ಘಟನೆಯ ವಿವರ: ಕಾಂಗ್ರೆಸ್ ಮುಖಂಡ ಶರಣಪ್ಪ ಮೇಟಿ ಪುತ್ರ ದೇವರೆಡ್ಡಿ ನೌಕರಿ ಕೊಡಿಸುವ ಆಮಿಷವೊಡ್ಡಿ ಹಟ್ಟಿಯ ಯುವತಿಯೊಬ್ಬಳನ್ನು ಅಪಹರಿಸಿಕೊಂಡು ಅತ್ಯಾಚಾರ ಎಸಗಿದ್ದ. ನಂತರ ಆಕೆಯನ್ನು ಮದುವೆಯಾಗುವುದಾಗಿ ಮಾತು ಕೂಡ ಕೊಟ್ಟಿದ್ದ. ಆದರೆ ಇದೀಗ ದೇವರೆಡ್ಡಿ ಮದುವೆ ಆಗಲ್ಲ ಎಂದು ಹೇಳಿ ನಾಪತ್ತೆಯಾಗಿದ್ದಾನೆ.
ಒಟ್ಟಿನಲ್ಲಿ ವಂಚನೆಗೊಳಗಾಗಿರುವ ಹಟ್ಟಿ ಯುವತಿ ಹಟ್ಟಿ ಠಾಣೆಯಲ್ಲಿ ದೂರನ್ನು ದಾಖಲಿಸಿ, ತನಗೆ ನ್ಯಾಯ ಒದಗಿಸಿಕೊಡಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾಳೆ. ಈ ಘಟನೆ ಕೂಡ ನಡೆದು ಮೂರು ತಿಂಗಳು ಕಳೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ದೇವರೆಡ್ಡಿ ಹಾಗೂ ಆತನ ಸ್ನೇಹಿತ ರಾಜು ಎಂಬಾತನ ಬಗ್ಗೆ ತೀವ್ರ ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.