ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರನ್ನು ಬಂಧಿಸದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಸಿಐಡಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದ್ದಾರೆ.
ಅತ್ಯಾಚಾರ ಆರೋಪ ಎದುರಿಸುತ್ತಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಸುಪ್ರೀಂಕೋರ್ಟ್ ಕೂಡ ಸ್ಪಷ್ಟ ನಿರ್ದೇಶನ ನೀಡಿತ್ತು. ಆದರೆ ಮುಖ್ಯಮಂತ್ರಿಗಳ ಕೃಪಾಕಟಾಕ್ಷದಿಂದಾಗಿ ಪ್ರಕರಣ ನಡೆದು ನಾಲ್ಕು ದಿನ ಕಳೆದರೂ ಕೂಡ ಹಾಲಪ್ಪನನ್ನು ಈವರೆಗೂ ಬಂಧಿಸಿಲ್ಲ ಎಂದು ದೂರಿದ ಅವರು, ಹಾಲಪ್ಪನನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.
ಅಲ್ಲದೇ ಸಿಐಡಿ ಅಧಿಕಾರಿಗಳು ಮುಖ್ಯಮಂತ್ರಿಗಳು ಮುಲಾಜಿಗೆ ಒಳಗಾಗುವುದರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
24 ಗಂಟೆಯೊಳಗೆ ತನಿಖೆ ಆದೇಶಿಸಿದ್ದೇನೆ-ಸಿಎಂ: ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣದ ಕುರಿತಂತೆ 24ಗಂಟೆಯೊಳಗೆ ಸಿಐಡಿ ತನಿಖೆಗೆ ಆದೇಶಿಸಿದ್ದೇನೆ. ಪ್ರಕರಣದಲ್ಲಿ ಯಾವುದೇ ರೀತಿಯಲ್ಲಿ ರಾಜಕೀಯವಾಗಿ ಒತ್ತಡ ಹಾಕಿಲ್ಲ, ವಿಪಕ್ಷಗಳು ಅನಾವಶ್ಯಕವಾಗಿ ಗೂಬೆ ಕೂರಿಸುವ ಯತ್ನ ಮಾಡುತ್ತಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಅತ್ಯಾಚಾರ ಪ್ರಕರಣದ ಬಗ್ಗೆ ಸಿಐಡಿ ಅಧಿಕಾರಿಗಳು ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ಖಚಿತ ಎಂದು ಸ್ಪಷ್ಟಪಡಿಸಿದ ಅವರು, ಹಾಲಪ್ಪ ನಾಪತ್ತೆ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.