ಆಡಳಿತಾರೂಢ ಬಿಜೆಪಿಗೆ ಶನಿ ವಕ್ಕರಿಸಿಕೊಂಡಿದೆಯೇನೊ ಎಂಬಂತೆ ಒಂದೊಂದೇ ಹುಳುಕುಗಳು ಹೊರಬರತೊಡಗಿದ್ದು, ರೇಣುಕಾಚಾರ್ಯ, ಸಂಪಂಗಿ, ಹಾಲಪ್ಪ ವಿವಾದಗಳ ನಂತರ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ವಿರುದ್ಧ ಅವರ ಪತ್ನಿ ಎಂದು ಹೇಳಿಕೊಂಡ ಮಹಿಳೆಯೊಬ್ಬರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ವಂಚನೆ ದೂರು ನೀಡುವ ಮೂಲಕ ಮತ್ತೊಂದು ವಿವಾದ ಹುಟ್ಟಿಕೊಂಡಿದೆ.
ತುಮಕೂರು ಜಿಲ್ಲೆಯ ತಿಪಟೂರಿನ ನಿವಾಸಿ ವಿಜಯಲಕ್ಷ್ಮಿ ಎಂಬುವರು ಪುಟ್ಟಸ್ವಾಮಿ ವಿರುದ್ಧ ಮಂಗಳವಾರ ವಂಚನೆಯ ದೂರು ನೀಡಿದ್ದಾರೆ. ಅಲ್ಲದೇ ತಾನು ಪುಟ್ಟಸ್ವಾಮಿ ಪತ್ನಿಯಾಗಿದ್ದು, ಅವರಿಂದ ತನಗೆ ಅನ್ಯಾಯವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ವಂಚನೆನೆ ದೂರಿನ ವಿವರ: ಗುಂಡುರಾವ್ ಅವರು ಮಖ್ಯಮಂತ್ರಿಯಾಗಿದ್ದಾಗ ತಿಪಟೂರಿಗೆ ಬಂದಿದ್ದ ಪುಟ್ಟಸ್ವಾಮಿ ತನಗೆ ಪರಿಚಯವಾಗಿದ್ದರು. ಅಲ್ಲದೇ ಅವರೊಂದಿಗೆ ನನ್ನ ವಿವಾಹ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತ್ತು. ನಂತರ ನಾನು ಮತ್ತು ಪುಟ್ಟಸ್ವಾಮಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಮೂರು ವರ್ಷಗಳ ಕಾಲ ಸಂಸಾರ ನಡೆಸಿದ್ದೇವು. ಆದರೆ ಪುಟ್ಟಸ್ವಾಮಿಗೆ ನನಗಿಂತಲೂ ಮೊದಲು ಶಾಂತ ಎಂಬುವರೊಡನೆ ಮದುವೆ ಆಗಿರುವುದು ತಿಳಿದಿರಲಿಲ್ಲ. ನಂತರ ನನ್ನ ತಂದೆ, ತಾಯಿ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ನೋಡಿಕೊಳ್ಳಲು ಮೈಸೂರಿನಿಂದ ತಿಪಟೂರಿಗೆ ವಾಪಸಾಗಿದ್ದೆ. ಅದಾದ ನಂತರ ನನಗೆ ಪುಟ್ಟಸ್ವಾಮಿ ಹಣ ಕಳುಹಿಸಿದ್ದರು. ಇದೀಗ ನನ್ನ ತಂದೆ, ತಾಯಿ ತೀರಿಕೊಂಡಿದ್ದಾರೆ. ಪುಟ್ಟಸ್ವಾಮಿ ಕೂಡ ಯಾವುದೇ ಆರ್ಥಿಕ ನೆರವು ನೀಡುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದೆಲ್ಲಾ ಸುಳ್ಳು ಆರೋಪ-ಪುಟ್ಟಸ್ವಾಮಿ: ವಿಜಯಲಕ್ಷ್ಮಿ ಎಂಬ ಮಹಿಳೆಯ ಆರೋಪವನ್ನು ಪುಟ್ಟಸ್ವಾಮಿ ನಿರಾಕರಿಸಿದ್ದು, ಈ ಬಗ್ಗೆ ಎರಡು ದಿನಗಳಲ್ಲಿ ಸಮರ್ಪಕ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ್ದಾರೆ. ವಿಜಯಲಕ್ಷ್ಮಿ ಎಂಬಾಕೆ ಜೊತೆ ನಾನು ವಿವಾಹವೂ ಆಗಿಲ್ಲ, ಸಂಸಾರವನ್ನೂ ಹೂಡಿಲ್ಲ ಎಂದು ಹೇಳಿದರು.