ಅತ್ಯಾಚಾರ ಆರೋಪ ಎದುರಿಸುವ ಮೂಲಕ ಹರತಾಳು ಹಾಲಪ್ಪ ರಾಜೀನಾಮೆ ಕೊಟ್ಟ ಬೆನ್ನಲ್ಲೇ, ಇದೀಗ ಬಿಜೆಪಿ ಪಾಳಯದಲ್ಲಿ ಸಚಿವ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಕಸರತ್ತು ಬಿರುಸುಗೊಂಡಿದೆ.
ಸ್ನೇಹಿತ ವೆಂಕಟೇಶ್ ಪತ್ನಿ ಚಂದ್ರಾವತಿ ಅತ್ಯಾಚಾರ ಆರೋಪದಲ್ಲಿ ಹಾಲಪ್ಪ ರಾಜೀನಾಮೆ ನೀಡಿರುವುದರಿಂದ ಬಿಜೆಪಿಯಲ್ಲಿ ಎರಡು ಸಚಿವ ಸ್ಥಾನ ಖಾಲಿ ಉಳಿದಿದೆ. ಈ ಹಿಂದೆ ಇಂಧನ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಆ ನೆಲೆಯಲ್ಲಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆಲವು ಶಾಸಕರು ಮಂತ್ರಿ ಸ್ಥಾನ ಪಡೆಯಲು ಬಹಳಷ್ಟು ಲಾಭಿ ನಡೆಸುತ್ತಿದ್ದಾರೆಂದು ಮೂಲವೊಂದು ತಿಳಿಸಿದೆ. ಮೊದಲಿನಿಂದಲೂ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ತಮ್ಮ ಆಪ್ತ ಶಾಸಕರೊಂದಿಗೆ ಮಂತ್ರಿ ಸ್ಥಾನಕ್ಕಾಗಿ ಗುಪ್ತ ಕಾರ್ಯಾಚರಣೆ ಆರಂಭಿಸಿದ್ದಾರೆ.
ಅಬಕಾರಿ ಸಚಿವ ರೇಣುಕಾಚಾರ್ಯ, ಶಾಸಕ ಬಿ.ಪಿ.ಹರೀಶ್, ವೈ.ಸಂಪಂಗಿ, ಡಾ.ಸೌರ್ವಭೌಮ ಬಗಲಿ ಸೇರಿದಂತೆ ಮತ್ತಿತರ ಶಾಸಕರು ಸಂಪುಟಕ್ಕೆ ತಮ್ಮ ಬಣದ ಶಾಸಕರೊಬ್ಬರನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರಿಗೆ ದುಂಬಾಲು ಬಿದ್ದಿದ್ದಾರೆ.
ಆರ್ಎಸ್ಎಸ್ ನಾಯಕರ ಭೇಟಿ: ಹಾಲಪ್ಪ ಪ್ರಕರಣ ಹಾಗೂ ಸಚಿವ ಸಂಪುಟದಲ್ಲಿ ಮತ್ತೆ ಯಾರಿಗೆ ಅವಕಾಶ ನೀಡಬೇಕು ಎಂಬ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ಆರ್ಎಸ್ಎಸ್ ಕೇಂದ್ರ ಕಚೇರಿ ಕೇಶವಕೃಪಾಕ್ಕೆ ತೆರಳಿ, ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘ ಮಾತುಕತೆ ನಡೆಸಿದರು. ಸಚಿವ ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿ ಉಳಿದಿದ್ದು, ಗ್ರಾಮ ಪಂಚಾಯ್ತಿ ಚುನಾವಣೆ ನಂತರ ಆ ಸ್ಥಾನಕ್ಕೆ ಸಚಿವರನ್ನು ನೇಮಕ ಮಾಡುವಂತೆ ಆರ್ಎಸ್ಎಸ್ ಮುಖಂಡರು ಸೂಚಿಸಿದ್ದಾರೆನ್ನಲಾಗಿದೆ. ಅಲ್ಲದೇ ಹಾಲಪ್ಪ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಮುಂದಿನ ಹೆಜ್ಜೆ ಇಡುವಂತೆಯೂ ಸಲಹೆ ನೀಡಿದ್ದಾರೆನ್ನಲಾಗಿದೆ.