ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಕೋಲಾರ, ತುಮಕೂರು ಸೇರಿ ರಾಜ್ಯದ 16 ಜಿಲ್ಲೆಗಳಲ್ಲಿ ಮೇ 8ರಂದು ನಡೆಯಲಿರುವ ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ನಾಳೆ ಬೆಳಿಗ್ಗೆ 7 ರಿಂದ 5 ಗಂಟೆ ತನಕ ಮತದಾನ ನಡೆಯಲಿದೆ. ಈಗಾಗಲೇ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ, ಬಿರುಸಿನ ಪ್ರಚಾರ ಕೈಗೊಂಡಿದ್ದವು.
ಬಿಗಿ ಬಂದೋಬಸ್ತ್: ರಾಜ್ಯದ 16 ಜಿಲ್ಲೆಗಳ 2643 ಗ್ರಾಮ ಪಂಚಾಯಿತಿಗಳ 43, 822 ಸ್ಥಾನಗಳಿಗೆ ಮತದಾನ ಶಾಂತ ಮತ್ತು ಮುಕ್ತ ರೀತಿಯಲ್ಲಿ ನಡೆಸಲು ಪೊಲೀಸರು ಸೇರಿದಂತೆ ಚುನಾವಣಾ ಆಯೋಗ ಸಕಲ ಸಿದ್ದತೆ ಮಾಡಿಕೊಂಡಿದೆ. ಭದ್ರತೆಗಾಗಿ ರಾಜ್ಯ ಮೀಸಲು ಪಡೆಯ 150 ತುಕಡಿ, ಕೇರಳದ ಐದು, ತಮಿಳುನಾಡಿನ 3ಕಂಪನಿಗಳು, 19,397 ಸಿವಿಲ್ ಪೊಲೀಸರು ಹಾಗೂ ಗೃಹ ರಕ್ಷಕ ದಳದ 15,350 ಮಂದಿಯನ್ನು ನಿಯೋಜಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎ.ಆರ್.ಇನ್‌ಫ್ಯಾಂಟ್ ತಿಳಿಸಿದ್ದಾರೆ.
ಮದ್ಯ ನಿಷೇಧ: ಮತದಾನ ನಡೆಯುವ ಎಲ್ಲಾ ಜಿಲ್ಲೆಗಳಲ್ಲಿ ಶುಕ್ರವಾರ ಮಧ್ಯರಾತ್ರಿ 12ರಿಂದ ನಾಳೆ ಮಧ್ಯರಾತ್ರಿ 12ರವರೆಗೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಮತಗಟ್ಟೆಗಳ ಸಮೀಪ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.
ಗ್ರಾಮ ಪಂಚಾಯ್ತಿ ಮೊದಲ ಹಂತದ ಚುನಾವಣೆಯಲ್ಲಿ ಮಹಿಳೆಯರು ಮತ್ತು ಪುರುಷರು ಸೇರಿ ಒಟ್ಟು 1ಕೋಟಿ 26ಲಕ್ಷದ 62ಸಾವಿರ ಮತದಾರರು ನಾಳೆ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.
16 ಜಿಲ್ಲೆಗಳಲ್ಲಿ ಮತದಾನ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಉಡುಪಿ, ಕಾರ್ಕಳ ತಾಲೂಕು, ಬೀದರ್, ಬಳ್ಳಾರಿ, ರಾಯಚೂರು, ಗುಲ್ಬರ್ಗಾ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳ 2643 ಗ್ರಾಮ ಪಂಚಾಯಿತಿಗಳಿಗೆ ನಾಳೆ ಮತದಾನ ನಡೆಯಲಿದೆ.