ಬೆಂಗಳೂರಿಗೆ ಮೆಟ್ರೊ ರೈಲು ಕನಸು ಇದೀಗ ನನಸಾಗುವ ಕಾಲ ಕೂಡಿ ಬಂದಿದೆ. ಬಹು ನಿರೀಕ್ಷೆಯ ಮೆಟ್ರೋ ರೈಲು ಡಿಸೆಂಬರ್ ಅಂತ್ಯದ ವೇಳೆಗೆ ಪ್ರಯಾಣಿಕರಿಗೆ ಲಭ್ಯವಾಗಲಿದೆ.
ಈ ನಿಟ್ಟಿನಲ್ಲಿ ಎಂ.ಜಿ ರಸ್ತೆಯಿಂದ ಬೈಯಪ್ಪನ ಹಳ್ಳಿವರೆಗಿನ ಮೊದಲ ಹಂತದ ಏಳು ಕಿ.ಮೀ. ಹಳಿಯಲ್ಲಿ ನಗರ ರೈಲು ಸಂಚಾರಕ್ಕೆ ಚಾಲನೆ ದೊರೆಯಲಿದೆ ಎಂದು ನಗರದಲ್ಲಿ ಮೆಟ್ರೊ ಕಾಮಗಾರಿ ಪರಿಶೀಲನೆ ನಡೆಸಿದ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಕಾಮಗಾರಿ ಈಗಾಗಲೇ ಶೇ.75ರಷ್ಟು ಪ್ರಗತಿಯಲ್ಲಿದ್ದು, ಡಿಸೆಂಬರ್ 2010ಕ್ಕೆ ಮಾರ್ಗ ಸಂಚಾರಕ್ಕೆ ಸಿದ್ಧವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಅಧಿಕಾರ ವಹಿಸಿಕೊಂಡ ಬಳಿಕ ಕಾಮಗಾರಿ ಚುರುಕುಗೊಂಡಿದ್ದು, ಶೇ. 27ರಷ್ಟು ಪ್ರಗತಿ ಹೊಂದಿದೆ ಎಂದ ಅವರು, ಎಂ.ಜಿ. ರಸ್ತೆಯಲ್ಲಿ ಅನಿಲ್ ಕುಂಬ್ಳೆ ರಸ್ತೆಯಿಂದ ಕಾಮರಾಜ್ ರಸ್ತೆವರೆಗೆ, ಈ ಹಿಂದೆ ಇದ್ದ ಬುಲೆವಾರ್ಡ್ ಮತ್ತೆ ನಿರ್ಮಿಸಲಾಗುವುದು. ಈ ಪ್ರದೇಶದಲ್ಲಿ ಬೀದಿ ನಾಟಕ, ಸಂಗೀತ ಕಛೇರಿ, ಮಕ್ಕಳ ನಾಟಕಕ್ಕೆ ಅವಕಾಶ ನೀಡಲಾಗುವುದು ಎಂದರು.
ಇದೇ ವೇಳೆ ಮೈಸೂರು ಸ್ಯಾಂಡಲ್ ಕಂಪೆನಿಯನ್ನು ಸ್ಥಳಾಂತರದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರು ಸ್ಯಾಂಡಲ್ ಕಂಪೆನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಈ ಪ್ರದೇಶವನ್ನು ಸ್ಥಳಾಂತರ ಮಾಡುವ ಪ್ರಮಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.