'ಕಾಂಗ್ರೆಸ್ ನಾಯಕರು ನಾಯಿಗೆ ಸಮ, ಅವರಿಗೆ ನಾಯಿಗಳಿಗೆ ಇದ್ದಷ್ಟು ಪ್ರಾಮಾಣಿಕತೆಯೂ ಇಲ್ಲ' ಹೀಗೆಂದು ಬಹಿರಂಗವಾಗಿ ವಾಗ್ದಾಳಿ ನಡೆಸಿದವರು ರಾಜ್ಯ ಗ್ರಂಥಾಲಯ ಸಚಿವ ಶಿವನಗೌಡ ನಾಯಕ್!
ಶನಿವಾರ ರಾಯಚೂರಿನ ದೇವದುರ್ಗದ ಅರಕೆರೆಯಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಪ್ಪ ಅತ್ಯಾಚಾರ ಪ್ರಕರಣ ಕುರಿತಂತೆ ಕಾಂಗ್ರೆಸ್ನ ಕೆಲ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನ ಕೆಲ ನಾಯಕರು ನಾಯಿಗಳಿಗೆ ಸಮ ಎಂದು ಜರೆದರಲ್ಲದೆ, ಕಾಂಗ್ರೆಸ್ ಮುಖಂಡರಿಗೆ ನಾಯಿಗೆ ಇದ್ದಷ್ಟು ಪ್ರಾಮಾಣಿಕತೆಯೂ ಇಲ್ಲ. ಅಲ್ಲದೇ ಬಿಜೆಪಿಗಿಂತಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಹೆಚ್ಚು ಕಾಮುಕರಿದ್ದಾರೆ. ಅದಕ್ಕೆ ರಾಯಚೂರಿನ ಮಾಜಿ ಸಂಸದರ ಪುತ್ರರೇ ಸಾಕ್ಷಿ ಎಂದು ಕಿಡಿಕಾರಿದರು.
ನಾಯಿಯಾದರೂ ಕನಿಷ್ಠ ಪಕ್ಷ ಕಳ್ಳ ಯಾರು, ಸುಳ್ಳ ಯಾರು ಎಂದು ನೋಡಿ ಬೊಗಳುತ್ತದೆ. ಆದರೆ ಕಾಂಗ್ರೆಸ್ ನಾಯಕರಿಗೆ ಆ ಪ್ರಜ್ಞೆ ಇಲ್ಲದೆಯೇ ಹೇಳಿಕೆ ನೀಡುತ್ತಾರೆ ಎಂದು ನಾಯಕ್, ಕಾಂಗ್ರೆಸ್ ನಾಯಕರನ್ನು ನಾಯಿಗೆ ಸರಿಸಮಾನ ಅಂದ್ರೂ ತಪ್ಪಾಗುತ್ತದೆ. ಯಾಕೆಂದರೆ ನಾಯಿಗೆ ನಿಷ್ಠೆ ಇದೆ ಎಂದು ಕೂಡ ಈ ಸಂದರ್ಭದಲ್ಲಿ ಹೇಳಿದರು!
ಆಡಳಿತಾರೂಢ ಬಿಜೆಪಿ ಪಕ್ಷದ ಸಚಿವರು, ಶಾಸಕರ ವಿರುದ್ಧ ಕಾಂಗ್ರೆಸ್ ನಾಯಕರಿಗೆ ತಾವು ಏನು ಮಾತನಾಡುತ್ತಿದ್ದೇವೆ ಎಂಬ ಅರಿವೇ ಅವರಿಗಿಲ್ಲ. ಹಾಗಾಗಿ ಕಾಂಗ್ರೆಸ್ ನಾಯಕರು ತಮ್ಮ ನಾಲಿಗೆ ಮೇಲೆ ಹಿಡಿತವಿಟ್ಟುಕೊಳ್ಳಬೇಕು ಎಂಬುದಾಗಿಯೂ ಈ ಸಂದರ್ಭದಲ್ಲಿ ಸಲಹೆ ನೀಡಿದರು.
ಕಾಂಗ್ರೆಸ್ ನಾಯಕರು ನಾಯಿಗೆ ಸಮ ಎಂಬ ವಾಗ್ದಾಳಿಗೆ ಪ್ರತಿಕ್ರಿಯೆ ನೀಡಿರುವ ರಾಯಚೂರು ಜಿಲ್ಲಾ ಪಂಚಾಯತ್ ಸದಸ್ಯ, ಕಾಂಗ್ರೆಸ್ ಮುಖಂಡ ರಾಜಶೇಖರ್, ಸಚಿವರಾದವರು ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿಟ್ಟುಕೊಳ್ಳಬೇಕು ಎಂದರು. ಶಿವನಗೌಡ ಅವರು ಕತ್ತೆಗಿಂತ ಕಡೆ ಎಂಬುದಾಗಿ ತಿರುಗೇಟು ನೀಡಿದ್ದಾರೆ.