ಬಳ್ಳಾರಿ ಗಣಿ ಧಣಿಗಳಾದ ರೆಡ್ಡಿ ಸಹೋದರರು ಜಿಲ್ಲೆಯ ರಾಮಗಡ ಬೆಟ್ಟದಲ್ಲಿ ಕಳೆದ ಒಂದು ವಾರದಿಂದ ಹೊಸದಾಗಿ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದು, ಪ್ರತಿನಿತ್ಯ 10ರಿಂದ 15 ಸಾವಿರ ಟನ್ ಅದಿರನ್ನು ತಮಿಳುನಾಡಿನ ಚೆನ್ನೈ ಮತ್ತು ಆಂಧ್ರದ ಕೃಷ್ಣಪಟ್ಟಣಂ ಬಂದರುಗಳಿಗೆ ಸಾಗಿಸುತ್ತಿದ್ದಾರೆಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.
ಶನಿವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಮಗಡ ಬೆಟ್ಟದಲ್ಲಿ ಅಕ್ರಮ ಹಾಗೂ ಕಾನೂನು ಬಾಹಿರವಾಗಿ ಗಣಿಗಾರಿಕೆ ಆರಂಭಿಸಿದ್ದು, ಈಗಾಗಲೇ ಬೆಟ್ಟದ ತಲೆಭಾಗವನ್ನು ಕಡಿದು ನೆಲಸಮ ಮಾಡಿದ್ದಾರೆಂದು ದೂರಿದರು.
ರಾಮಗಡ ಬೆಟ್ಟದ ಶಿರಭಾಗವನ್ನು ನಾಶಪಡಿಸಿರುವ ಛಾಯಚಿತ್ರಗಳನ್ನು ಪ್ರದರ್ಶಿಸಿದ ಗೌಡರು, ಅರಣ್ಯದ ಮಧ್ಯದಲ್ಲಿರುವ ಬೆಟ್ಟದಲ್ಲಿ ಅಕ್ರಮವಾಗಿ ಅದಿರನ್ನು ತೆಗೆಯಲಾಗುತ್ತಿದೆ ಎಂದು ವಿವರಿಸಿದರು.
ಬೆಟ್ಟದಲ್ಲಿನ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಪರಿಸರವಾದಿಗಳು, ಚಿಂತಕರು ಹಾಗೂ ಸಾಹಿತಿಗಳ ಜತೆಗೂಡಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಅಲ್ಲದೇ ಅಕ್ರಮ ಗಣಿಗಾರಿಕೆ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪಿಸಲು ಸ್ಪೀಕರ್ ತಮಗೆ ಅವಕಾಶ ಕೊಟ್ಟಿಲ್ಲ ಎಂದ ಗೌಡರು, ಗಣಿ ಚರ್ಚೆಗೆ ಅವಕಾಶ ಸಿಗದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಸಂಸದರೇ ಪಿತೂರಿ ಮಾಡಿರುವುದಾಗಿಯೂ ದೂರಿದರು.