ಕಾಮಕಾಂಡ ಪ್ರಕರಣದಿಂದ ಕಳಂಕಿತರಾದ ಮಾಜಿ ಸಚಿವ ಹರತಾಳ್ ಹಾಲಪ್ಪ ಶನಿವಾರ ನಡೆದ ಗ್ರಾಮಪಂಚಾಯತ್ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಬರಲೇ ಇಲ್ಲ.
ತನ್ನ ಸ್ನೇಹಿತ ವೆಂಕಟೇಶ ಮೂರ್ತಿ ಪತ್ನಿ ಚಂದ್ರಾವತಿಯ ಮೇಲೆ ಅತ್ಯಾಚಾರ ಆರೋಪ ಹೊತ್ತಿರುವ ಹಾಲಪ್ಪ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು, ಮತ ಚಲಾಯಿಸಲು ಬರುವ ಲಕ್ಷಣಗಳಿದ್ದ ಕಾರಣ ಕಾದು ಕಾದು ಸುಸ್ತಾದರು. ಆದರೆ ಸಂಜೆಯವರೆಗೂ ಹಾಲಪ್ಪ ತನ್ನ ಸ್ವಗ್ರಾಮದ ಮತಗಟ್ಟೆಗೆ ಬಂದು ಮತ ಚಲಾಯಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ಸಿಐಡಿ ಪೊಲೀಸರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಬೇಕಾಯಿತು.
ಆರು ತಿಂಗಳ ಹಿಂದಷ್ಟೆ ಗ್ರಾಮ ಪಂಚಾಯತ್ ಉಪ ಚುನಾವಣೆಯ ಸಂದರ್ಭ ಸರ್ಕಾರಿ ವಾಹನದಲ್ಲೇ ಆಗಮಿಸಿ ಮತ ಚಲಾಯಿಸಿದ್ದ ಹಾಲಪ್ಪ. ಈ ಬಾರಿ ಮಾತ್ರ ತನ್ನ ಹಕ್ಕು ಚಲಾಯಿಸಿಲ್ಲ. ತನ್ನನ್ನು ಪೊಲೀಸರು ಬಂಧಿಸುವ ಅಪಾಯವನ್ನು ಅರಿತಿರುವ ಹಾಲಪ್ಪ ಮತ ಚಲಾವಣೆಗೆ ಬಂದಿಲ್ಲ ಎಂದು ಅಂದಾಜಿಸಲಾಗಿದೆ.
ವೆಂಕಟೇಶಮೂರ್ತಿ ಸ್ಥಳಾಂತರ: ಮಾಜಿ ಸಚಿವ ಹಾಲಪ್ಪ ಅವರ ಮೇಲೆ ತನ್ನ ಪತ್ನಿಯ ಅತ್ಯಾಚಾರ ಆರೋಪ ಮಾಡಿರುದ ವೆಂಕಟೇಶ ಮೂರ್ತಿ ತನ್ನ ಶಿವಮೊಗ್ಗದ ವಿನೋಬಾ ನಗರದ ಮನೆಯನ್ನು ಖಾಲಿ ಮಾಡುತ್ತಿದ್ದಾರೆ. ಭಾನುವಾರ ಬೆಳಗ್ಗಿನ ವೇಳೆಯಲ್ಲಿ ತನ್ನ ವಿನೋಬಾ ನಗರದ ಮನೆಯಿಂದ ಗೋಪಾಲ ಬಡಾವಣೆಗೆ ಮೂರ್ತಿ ತನ್ನ ಪತ್ನಿಯೊಂದಿಗೆ ಮನೆಯನ್ನು ಬದಲಾಯಿಸಿದ್ದಾರೆ. ವಿನೋಬಾ ನಗರದ ಮನೆಯಲ್ಲಿ ಪ್ರಕರಣ ನಡೆದ ಕಾರಣ ಮಾನಸಿಕ ನೆಮ್ಮದಿ ಹದಗೆಡುತ್ತಿದ್ದು, ಮನೆ ಬದಲಾಯಿಸಲಾಗುತ್ತಿದೆ. ಆ ಮೂಲಕ ತಾನು ಹಾಗೂ ಪತ್ನಿ ಮಾನಸಿಕ ನೆಮ್ಮದಿ ಪಡೆಯಲು ಬಯಸುತ್ತೇವೆ ಎಂದು ಮೂರ್ತಿ ಹೇಳಿದ್ದಾರೆ.