ಸ್ನೇಹಿತನ ಪತ್ನಿಯನ್ನೇ ಅತ್ಯಾಚಾರಗೈದ ಆರೋಪ ಹೊತ್ತು ತಲೆಮರೆಸಿಕೊಂಡಿರುವ ಮಾಜಿ ಸಚಿವ ಹರತಾಳ ಹಾಲಪ್ಪ ಅವರು ಇನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರಿಗೆ ಶರಣಾಗುತ್ತಾರೆಂಬ ದಟ್ಟ ವದಂತಿಯೀಗ ರಾಜಕೀಯ ವಲಯದಲ್ಲಿ ಹಬ್ಬಿದೆ.
ಮತದಾನಕ್ಕೂ ಗೈರುಹಾಜರಾಗಿ, ತಲೆಮರೆಸಿಕೊಂಡಿದ್ದ ಹಾಲಪ್ಪ ಅವರಿಗೆ ಸಿಐಡಿ ಪೊಲೀಸರು ಶರಣಾಗಲು ಸೋಮವಾರ (ಮೇ.10)ಕ್ಕೆ ಅಂತಿಮ ಗಡುವು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗಡುವು ಮುಗಿಯುವ ಮೊದಲೇ ಹಾಲಪ್ಪ ಭಾನುವಾರವೇ ಶರಣಾಗುತ್ತಾರೆಂಬ ಮಾಹಿತಿಯನ್ನು ಹಾಲಪ್ಪ ಆವರ ಆಪ್ತ ವಲಯ ಮಾಧ್ಯಮಗಳಿಗೆ ಸುಳಿವು ನೀಡಿದೆ.
ಅಷ್ಟೇ ಅಲ್ಲ, ಹಾಲಪ್ಪ ಅವರು ಈಗಾಗಲೇ ಶಿವಮೊಗ್ಗ ಕಡೆಗೆ ತೆರಳುತ್ತಿದ್ದು, ಸಂಜೆಯೊಳಗೆ ಶಿವಮೊಗ್ಗದ ವಿನೋಬಾನಗರದ ಪೋಲೀಸ್‌ಠಾಣೆಗೆ ಶರಣಾಗುತ್ತಾರೆ ಎನ್ನಲಾಗಿದ್ದು, ಈ ಸುದ್ದಿಯೀಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಎಡೆ ಮಾಡಿದೆ. ಹಾಲಪ್ಪ ಅವರು ಶರಣಾಗುತ್ತಿದ್ದಲ್ಲಿ, ಭಾನುವಾರ ರಜಾದಿನವಾದ್ದರಿಂದ ಪೊಲೀಸ್ ಠಾಣೆಯಲ್ಲೇ ಕಂಬಿ ಎಣಿಸಬೇಕಾಗಬಹುದು ಎನ್ನಲಾಗಿದೆ.
ಅಷ್ಟೇ ಅಲ್ಲದೆ, ಹಾಲಪ್ಪ ಅವರ ಜೊತೆಗೆ ಅವರ ಬೆಂಬಲಿಗ ಗಿರೀಶ್ ಕೂಡಾ ಶರಣಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದೇ ವೇಳೆ, ವಿನೋಬಾ ನಗರದ ಮನೆಯನ್ನು ವೆಂಕಟೇಶ್ ಮೂರ್ತಿ ಅವರು ಖಾಲಿ ಮಾಡುತ್ತಿದ್ದು, ಗೋಪಾಲ ಬಡಾವಣೆಯಲ್ಲಿ ಇನ್ನು ವಾಸಿಸಲಿದ್ದಾರೆ. ಮಾನಸಿಕ ನೆಮ್ಮದಿ ಅವರು ಮನೆ ಸ್ಥಳಾಂತರ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.