ಲೈಂಗಿಕ ಹಗರಣದ ಮೂಲಕ ಸುದ್ದಿಯಾಗಿರುವ ಮಾಜಿ ಸಚಿವ ಹಾಲಪ್ಪ ಪ್ರಕರಣದಿಂದ ಪಕ್ಷದ ನೈತಿಕತೆಗೆ ಪೆಟ್ಟು ಬಿದ್ದಿದೆ ಎಂದು ಸಚಿವ ಬಿ.ಎನ್.ಬಚ್ಚೇಗೌಡ ಅವರು ಹೇಳುವ ಮೂಲಕ ಪಕ್ಷದ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಸಾಮಾನ್ಯ ಜನರಲ್ಲಿ ಬಿಜೆಪಿ ಬಗ್ಗೆ ಇದ್ದ ಭಾವನೆಗೆ ಈ ಘಟನೆ ಧಕ್ಕೆ ತಂದಿರುವುದು ನಿಜ. ಆದರೆ ಈ ಪ್ರಕರಣವು ಗ್ರಾಮ ಪಂಚಾಯಿತಿ ಚುನಾವಣೆ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂದು ಹೇಳುವ ಮೂಲಕ ತಮ್ಮ ಮೊದಲ ಮಾತಿಗೆ ತಕ್ಷಣವೇ ಸಮಜಾಯಿಶಿ ನೀಡಿಕೊಂಡಿದ್ದಾರೆ.
ವಕೀಲನಾಗಿ ಕೆಲಸ ಮಾಡಿದ ಅನುಭವ ನನಗಿದೆ. ಹಾಲಪ್ಪ, ರೇಣುಕಾಚಾರ್ಯ ಮತ್ತು ನಿತ್ಯಾನಂದ ಪ್ರಕರಣಗಳು ಬೇರೆ ಬೇರೆ ಎಂದರು. ಈಗಿನ ಪರಿಸ್ಥಿತಿ ನೋಡಿದರೆ ಇನ್ನು ಮುಂದೆ ಯಾರ ಯಾರರ ಸಿಡಿಗಳು ಹೊರ ಬರುತ್ತವೆಯೊ ಬಲ್ಲವರಾರು? ಎಂದು ಹೇಳುವ ಮೂಲಕ ನಗೆ ಅಲೆ ಸೃಷ್ಟಿಸಿ ಮಾತಿನ ಭರಕ್ಕೆ ಕಡಿವಾಣ ಹಾಕಿಕೊಂಡರು.
ಹಾಗೆಯೇ ಹಾಲಪ್ಪ ಪ್ರಕರಣದಿಂದ ತಮ್ಮ ಪಕ್ಷ ಹಾಗೂ ಮುಖ್ಯಮಂತ್ರಿ ತಲೆ ತಗ್ಗಿಸುವಂತೆ ಆಗಿರುವುದನ್ನು ಪರೋಕ್ಷವಾಗಿ ಇಲ್ಲಿ ಒಪ್ಪಿಕೊಂಡ ಅವರು, ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಲಿ. ತನಿಖೆಯಲ್ಲಿ ಸರಕಾರ ಅಡ್ಡ ಬರುವುದಿಲ್ಲ. ಪ್ರಭಾವ ಬೀರುವುದಿಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ ಎಂದು ಹೇಳಿದ್ದಾರೆ.