ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಭಾನುವಾರ ದಿಢೀರನೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುರುಗನ್ ಅವರ ಸಮ್ಮುಖದಲ್ಲಿ ಹಾಜರಾಗಿದ್ದು, ಈ ಸಂದರ್ಭದಲ್ಲಿ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದರು.
ವೆಂಕಟೇಶ್ ಮೂರ್ತಿ ದಂಪತಿಗಳು ನೀಡಿದ್ದ ದೂರಿನನ್ವಯ ಮಾಜಿ ಸಚಿವ ಹಾಲಪ್ಪ ಅತ್ಯಾಚಾರ ಎಸಗಿದ್ದಾರೆಂಬ ಪ್ರಕರಣದ ಬಗ್ಗೆ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಮೇ 10ರೊಳಗೆ ಖುದ್ದಾಗಿ ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ತಮ್ಮ ವಕೀಲರೊಂದಿಗೆ ಕಾರಿನಲ್ಲಿ ಆಗಮಿಸಿದ್ದ ಹಾಲಪ್ಪ ಅವರು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ವಿಚಾರಣೆಗಾಗಿ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಸಿಐಡಿ ತಂಡ ಎಸ್ಪಿ ಕಚೇರಿಯಲ್ಲಿಯೇ ಐದು ಗಂಟೆಗಳ ಕಾಲ ವಿಚಾರಣೆಗೆ ಗುರಿಪಡಿಸಿದ್ದರು.
ಎದೆನೋವು-ಆಸ್ಪತ್ರೆಗೆ ದಾಖಲಾದ ಹಾಲಪ್ಪ: ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ವಿಚಾರಣೆ ನಡೆಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿ, ಹಾಲಪ್ಪ ಅವರನ್ನು ಜಿಲ್ಲಾ ಕಾರಾಗೃಹಕ್ಕೆ ತರುತ್ತಿರುವ ಸಂದರ್ಭದಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಬಿಗಿ ಬಂದೋಬಸ್ತ್‌ನಲ್ಲಿ 9.45ಕ್ಕೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ತಪಾಸಣೆ ನಡೆಸಿದ್ದಾರೆ.
ಅತ್ಯಾಚಾರ ಪ್ರಕರಣದ ಆರೋಪ ಮಾಧ್ಯಮವೊಂದರಲ್ಲಿ ಬಯಲಾಗುತ್ತಿದ್ದಂತೆಯೇ ಹರತಾಳು ಹಾಲಪ್ಪ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು. ಪ್ರತಿಪಕ್ಷಗಳ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಮೇ 10ರೊಳಗೆ ಖುದ್ದು ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ಮಹತ್ವದ ಬೆಳವಣಿಗೆ ಎಂಬಂತೆ ಭಾನುವಾರ ಹಾಲಪ್ಪ ಶಿವಮೊಗ್ಗದಲ್ಲಿ ಪ್ರತ್ಯಕ್ಷವಾಗಿ, ವಿಚಾರಣೆಗೆ ಹಾಜರಾಗಿದ್ದರು.
ನ್ಯಾಯಾಧೀಶರ ಮುಂದೆ ಹಾಜರ್: ಹಾಲಪ್ಪ ಅವರನ್ನು ಸುದೀರ್ಘ ವಿಚಾರಣೆಗೆ ಗುರಿಪಡಿಸಿದ ನಂತರ ಅವರನ್ನು ರಾತ್ರಿ 9ಗಂಟೆ ಹೊತ್ತಿಗೆ ಸಿಐಡಿ ಪೊಲೀಸರು ಮೂರನೇ ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಗೌಡ ಅವರ ಎದುರು ಅವರ ಮನೆಯಲ್ಲಿ ಹಾಜರುಪಡಿಸಿದ್ದರು. ನಂತರ ನ್ಯಾಯಾಧೀಶರು ಆರೋಪಿಯನ್ನು ಒಂದು ದಿನದ ನ್ಯಾಯಾಂಗ ಬಂಧನಕ್ಕೆ ಆದೇಶಿಸಿ, ಮೇ 10ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸಿಐಡಿ ಅಧಿಕಾರಿಗಳಿಗೆ ಸೂಚಿಸಿದರು. ಮೇ 11ರಂದು ಹಾಲಪ್ಪ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.