ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಗೆ ಶಿವಮೊಗ್ಗದ 2ನೇ ಜೆಎಂಎಫ್‌ಸಿ ನ್ಯಾಯಾಲಯ ಸೋಮವಾರ ಮೇ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಭಾನುವಾರ ಮಹತ್ವದ ಬೆಳವಣಿಗೆ ಎಂಬಂತೆ ನಾಪತ್ತೆಯಾಗಿದ್ದ ಹಾಲಪ್ಪ ಅವರು ಶಿವಮೊಗ್ಗ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಗೆ ದಿಢೀರ್ ಆಗಿ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಸಿಐಡಿ ಅಧಿಕಾರಿಗಳು ಕೆಲವು ಗಂಟೆಗಳ ಕಾಲ ತನಿಖೆ ನಡೆಸಿ, ರಾತ್ರಿ 3ನೇ ಜೆಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಈ ಸಂದರ್ಭದಲ್ಲಿ ಹಾಲಪ್ಪ ಅವರಿಗೆ ಒಂದು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ, ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದರು.
ಆ ನಿಟ್ಟಿನಲ್ಲಿ ಇಂದು ಮಧ್ಯಾಹ್ನ ಸಿಐಡಿ ಅಧಿಕಾರಿಗಳು ಅವರನ್ನು 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಮೇ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ವೆಂಕಟೇಶ್ ಮೂರ್ತಿ ದಂಪತಿಗಳು ನೀಡಿದ್ದ ದೂರಿನ ಅನ್ವಯ ಸಚಿವ ಹಾಲಪ್ಪ ಅತ್ಯಾಚಾರ ಎಸಗಿದ್ದಾರೆಂಬ ಪ್ರಕರಣದ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ಅಲ್ಲದೇ ಮೇ 10ರೊಳಗೆ ಖುದ್ದು ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು.
ಆ ಹಿನ್ನೆಲೆಯಲ್ಲಿ ನಿನ್ನೆ ಹಾಲಪ್ಪ ದಿಢೀರ್ ಆಗಿ ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಬಂಧನ, ವಿಚಾರಣೆ, ನ್ಯಾಯಾಂಗ ಬಂಧನದ ಪ್ರಕ್ರಿಯೆ ನಡೆದಿತ್ತು.
ತದನಂತರ ಹಾಲಪ್ಪ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾತ್ರಿಯೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯಾಧಿಕಾರಿಗಳು ಹಾಲಪ್ಪ ಅವರ ಆರೋಗ್ಯದ ತಪಾಸಣೆ ನಡೆಸಿದ್ದರು. ಏತನ್ಮಧ್ಯೆ ಹಾಲಪ್ಪ ಅವರ ಪರ ವಕೀಲರಾದ ರವಿ ನಾಯಕ್ ಅವರು ಸೋಮವಾರ ಜಾಮೀನು ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.