ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಕ್ರಮ ನಕಲಿ ಸಾರಾಯಿ ಸಾಗಾಣಿಕೆಯಾಗದಂತೆ ಎಚ್ಚರಿಕೆ ಕ್ರಮ ಕೈಗೊಂಡಿರುವ ನಡುವೆಯೂ ನಕಲಿ ಸಾರಾಯಿ ಕುಡಿದು ಆರು ಜನ ಮೃತ ಪಟ್ಟ ಘಟನೆ ಶಿಡ್ಲಘಟ್ಟದಲ್ಲಿ ನಡೆದಿದೆ.
ಮೇ 8ರಂದು ರಾಜ್ಯದ 16 ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿಗೆ ಮೊದಲ ಹಂತದ ಮತದಾನ ನಡೆದಿತ್ತು. ಇದೀಗ ಮೇ 12ರಂದು ಎರಡನೇ ಹಂತದ ಮತದಾನ ನಡೆಯಲಿದೆ.
ತಾಲೂಕಿನ ಚಿಕ್ಕ ದಿಬ್ಬೂರಹಳ್ಳಿಯಲ್ಲಿ ತಾಯಿ ಮಗ ಸೇರಿದಂತೆ ಆರು ಜನ ನಕಲಿ ಸಾರಾಯಿ ಕುಡಿದು ಮೃತಪಟ್ಟಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ ಕೂಡ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಿಕೊಳ್ಳಲು ಕಳಪೆ ಗುಣಮಟ್ಟದ ಮದ್ಯವನ್ನು ಯಥೇಚ್ಛವಾಗಿ ಸರಬರಾಜು ಮಾಡಿರುವುದಾಗಿ ತಿಳಿದು ಬಂದಿದೆ.
ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಅಬಕಾರಿ ಸಚಿವ ರೇಣುಕಾಚಾರ್ಯ, ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ರಾಜ್ಯದ ವಿವಿಧ ಭಾಗಗಳಲ್ಲಿ ನಕಲಿ ಮದ್ಯ ಹಾಗೂ ಕಳ್ಳಭಟ್ಟಿ ಸರಬರಾಜನ್ನು ತಡೆಯುವಲ್ಲಿ ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಎರಡನೇ ಹಂತಕ್ಕೆ ಸಿದ್ಧಗೊಂಡಿರುವ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಈ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದ ಅವರು, ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.