ಅಕ್ರಮ ಗಣಿಗಾರಿಕೆ ಹಾಗೂ ಗಡಿ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರಿಗೆ ಬುಲಾವ್ ನೀಡಿದ್ದು, ಅಕ್ರಮ ಗಣಿಗಾರಿಕೆ ವಿಚಾರಣೆಯನ್ನು ರಾಜ್ಯಪಾಲರು ಜೂನ್ 3ಕ್ಕೆ ಮುಂದೂಡಿದ್ದಾರೆ.
ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ರೆಡ್ಡಿ ಸಹೋದರರ ಮೇಲೆ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಸಲ್ಲಿಸಿರುವ ದೂರಿನ ಹಿನ್ನೆಲೆಯಲ್ಲಿ ತಮ್ಮ ಮುಂದೆ ಹಾಜರಾಗಿ ವಿವರಣೆ ಸಲ್ಲಿಸುವಂತೆ ರಾಜ್ಯಪಾಲರು ಷೋಕಾಸ್ ನೋಟಿಸ್ ಜಾರಿ ಮಾಡಿದ್ದರು.
ಆದರೆ ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಖುದ್ದಾಗಿ ಹಾಜರಾಗುವಂತೆ ಸೂಚನೆ ನೀಡಿದ್ದರು. ಬಳಿಕ ಸಚಿವ ಜನಾರ್ದನ ರೆಡ್ಡಿ ಖುದ್ದಾಗಿ ಹಾಜರಾಗದೆ, ಬದಲಾಗಿ ವಕೀಲರನ್ನು ಕಳುಹಿಸಿದ್ದರು. ಅಲ್ಲದೆ, ಅಕ್ರಮ ಗಣಿಗಾರಿಕೆಯಲ್ಲಿ ಯಾವುದೇ ತೊಡಕಾಗಿಲ್ಲ. ಈ ಆರೋಪಗಳೆಲ್ಲಾ ಸುಳ್ಳು ಎಂದು ವಕೀಲರು ರಾಜ್ಯಪಾಲರಿಗೆ ವಿವರಣೆ ನೀಡಿದ್ದರು.
ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಯಾವುದೇ ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾಗಿಲ್ಲ. ದುರುದ್ದೇಶದಿಂದ ಈ ರೀತಿ ರಾಜಕೀಯ ಪ್ರೇರಿತವಾಗಿ ಆರೋಪ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ವಕೀಲರ ವಿವರಣೆ ಆಲಿಸಿದ ರಾಜ್ಯಪಾಲರು ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಿದ್ದಾರೆ.