ನಡೆದಾಡುವ ದೇವರು ಎಂದೇ ಜನಜನಿತರಾಗಿರುವ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರು ಇನ್ಮುಂದೆ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸ್ವಾಮೀಜಿಗಳನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ. ಶಿವಕುಮಾರ ಸ್ವಾಮೀಜಿಗಳು ಇನ್ನು 10 ವರ್ಷಗಳ ಕಾಲ ಬದುಕಿ, ಎಲ್ಲಾ ಭಕ್ತಾದಿಗಳನ್ನು ಹರಸಲಿ ಎಂಬ ಉದ್ದೇಶದಿಂದ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಸಮಾರಂಭ ಎಷ್ಟೇ ದೊಡ್ಡದಿರಲಿ ಅಥವಾ ವ್ಯಕ್ತಿ ಎಷ್ಟೇ ದೊಡ್ಡವನಿರಲಿ ಯಾರೂ ಕೂಡ ಸಿದ್ದಗಂಗಾಶ್ರೀಗಳನ್ನು ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸಬಾರದು. ಅಲ್ಲದೆ, ಶ್ರೀಗಳನ್ನು ಸಭೆ ಸಮಾರಂಭಗಳಲ್ಲಿ ಗಂಟೆ ಗಟ್ಟಲೆ ಕೂರಿಸುವುದು ಸರಿಯಲ್ಲ. ಮಠಕ್ಕೆ ಬರುವ ಭಕ್ತರು ಪಾದ ಮುಟ್ಟಿ ನಮಸ್ಕರಿಸುವುದು ಬೇಡ. ಬದಲಾಗಿ ದೂರದಿಂದಲೇ ನಮಸ್ಕರಿಸಿದರೆ ಒಳ್ಳೆಯದು ಎಂದು ಅವರು ಸಲಹೆ ನೀಡಿದ್ದಾರೆ.
ಸ್ವಾಮೀಜಿಗಳು ಇನ್ನು ಹಲವು ವರ್ಷ ಬಾಳಲಿ ಎಂಬ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಲಿ ಎಂಬುದೇ ನನ್ನ ಆಶಯ ಎಂದರು.