ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಗೆ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮೇ 13ಕ್ಕೆ ಮುಂದೂಡಿದ್ದು, ಪ್ರಕರಣದ ಕುರಿತು ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಹರತಾಳು ಹಾಲಪ್ಪ ಅವರಿಗೆ ಜಾಮೀನು ನೀಡುವಂತೆ ಕೋರಿ ಸೋಮವಾರ ಹಾಲಪ್ಪ ಪರ ವಕೀಲ ರವಿ ಬಿ.ನಾಯಕ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿಯನ್ನು ವಿಚಾರಣೆಯನ್ನು ಮೇ 13ಕ್ಕೆ ಮುಂದೂಡಿ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ವಕೀಲರಿಗೆ ಹೈಕೋರ್ಟ್ ಪೀಠ ಸೂಚಿಸಿದೆ.
ಏತನ್ಮಧ್ಯೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಪ್ಪ ಅವರ ರಕ್ತದ ಮಾದರಿ ಪರೀಕ್ಷಿಸಲು ಸೂಚನೆ ನೀಡಬೇಕೆಂದು ಕೋರಿ ಸಿಐಡಿ ಅಧಿಕಾರಿಗಳು ಸಲ್ಲಿಸಿದ್ದ ಮನವಿಗೆ, ಯಾವುದೇ ಕಾರಣಕ್ಕೂ ರಕ್ತದ ಮಾದರಿ ನೀಡುವಂತೆ ಒತ್ತಡ ಹೇರುವಂತಿಲ್ಲ. ಒಂದು ವೇಳೆ ಹಾಲಪ್ಪ ಅವರು ಒಪ್ಪಿದರೆ ರಕ್ತದ ಮಾದರಿ ಪರೀಕ್ಷೆ ನಡೆಸಬಹುದಾಗಿದೆ ಎಂದು ನ್ಯಾಯಪೀಠ ಅಧಿಕಾರಿಗಳು ತಿಳಿಸಿದೆ.
ಇದೀಗ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಎದೆನೋವಿನಿಂದಾಗಿ ಹಾಲಪ್ಪ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಪದೇ ಪದೇ ತಲೆಸುತ್ತು ಮತ್ತು ಎದೆನೋವು ಕಾಣಿಸಿಕೊಳ್ಳುತ್ತಿರುವುದರಿಂದ ಹಾಲಪ್ಪ ಅವರನ್ನು ಬೆಂಗಳೂರಿನ ಜಯದೇವ ಅಥವಾ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸುವ ಚಿಂತನೆ ನಡೆಸಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಹಾಲಪ್ಪ ಅವರಿಗೆ ಜಾಮೀನು ನೀಡುವಂತೆ ಸೋಮವಾರ ಶಿವಮೊಗ್ಗದ 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ನಿನ್ನೆ ಸಂಜೆ ಹಾಲಪ್ಪ ಪರ ವಕೀಲರಾದ ರವಿ ಬಿ.ನಾಯಕ್ ಅವರು ಜಾಮೀನು ನೀಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆ ಕಾರಣಕ್ಕಾಗಿ ಶಿವಮೊಗ್ಗ ಕೋರ್ಟ್‌ಗೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಂಗಳವಾರ ವಕೀಲ ಅಶೋಕ್ ಭಟ್ ಅವರು ವಾಪಸ್ ಪಡೆದಿದ್ದರು.