ನೆರೆ ಪೀಡಿತ ಪ್ರದೇಶಗಳಲ್ಲಿ ಸುಮಾರು 35 ರಿಂದ 40 ಸಾವಿರ ಮನೆಗಳ ನಿರ್ಮಾಣ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಈ ಮನೆಗಳನ್ನು ಸಂತ್ರಸ್ತರಿಗೆ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ನೆರೆ ಪೀಡಿತ ಜಿಲ್ಲೆಗಳಲ್ಲಿ ಮನೆ ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಸುಮಾರು 35 ಸಾವಿರ ಮನೆಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಗೋವಿಂದ ಪ್ರಸಾದ್ ಮಾನವತಾ ಪ್ರತಿಷ್ಠಾನದೊಂದಿಗೆ ನೆರೆ ಪೀಡಿತ ಪ್ರದೇಶಗಳಲ್ಲಿ ಮನೆ ನಿರ್ಮಾಣ ಸಂಬಂಧ ಸುಮಾರು 6 ಸಾವಿರ ಮನೆಗಳ ನಿರ್ಮಾಣದ ಅಂಗವಾಗಿ ಒಡಂಬಡಿಕೆ ಮಾಡಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ರಾಷ್ಟ್ರದಲ್ಲೇ ನೆರೆ ಪ್ರದೇಶಗಳಲ್ಲಿ ಕ್ಷಿಪ್ರಗತಿಯಲ್ಲಿ ಮನೆ ನಿರ್ಮಿಸಿದ ಕೀರ್ತಿ ರಾಜ್ಯ ಸರ್ಕಾರದ್ದು ಎಂದರು.
ಮನೆ ನಿರ್ಮಾಣಗಳ ಜೊತೆಗೆ ಕುಡಿಯುವ ನೀರು, ರಸ್ತೆ, ಶಾಲೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು. ನೆರೆ ಪೀಡಿತ ಪ್ರದೇಶಗಳ ಕೆಲವು ಕಡೆ ಮಳೆಗಾಲದ ಒಳಗೆ ಮನೆ ನಿರ್ಮಾಣ ಸಾಧ್ಯವಾಗದಿದ್ದರೆ ಈಗ ಸಂತ್ರಸ್ತರು ಇರುವ ತಾತ್ಕಾಲಿಕ ಶೆಡ್‌ಗಳನ್ನೇ ಬಲಪಡಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ ಎಂದರು.