ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರೆಡ್ಡಿಯನ್ನು ಸುಪ್ರೀಂ ಸತ್ಯ ಹರಿಶ್ಚಂದ್ರ ಅಂತ ಹೇಳಿಲ್ಲ: ಸಿದ್ದು (Janardana Reddy | Supreme court | Siddaramaiah | Congress | OMC)
ರೆಡ್ಡಿಯನ್ನು ಸುಪ್ರೀಂ ಸತ್ಯ ಹರಿಶ್ಚಂದ್ರ ಅಂತ ಹೇಳಿಲ್ಲ: ಸಿದ್ದು
ಬೆಂಗಳೂರು, ಮಂಗಳವಾರ, 11 ಮೇ 2010( 17:38 IST )
ಅಕ್ರಮ ಗಣಿಗಾರಿಕೆ ಕುರಿತಂತೆ ಸುಪ್ರೀಂಕೋರ್ಟ್ ಒಎಂಸಿ ಮಾಲೀಕ ಜನಾರ್ದನ ರೆಡ್ಡಿ ಪರವಾಗಿ ತೀರ್ಪು ನೀಡಿಲ್ಲ ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿವಾದ ರಹಿತ ಸ್ಥಳದಲ್ಲಿ ಗಣಿಗಾರಿಕೆ ನಡೆಸುವಂತೆ ಅನುಮತಿ ನೀಡಿದೆ ಅಷ್ಟೇ ಎಂದು ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಗಣಿ ಕುಳ ರಾಹುಲ್ ಬಲ್ಡೋಟಾ ನಮಗೆ ಹಣ ನೀಡುತ್ತಿದ್ದಾರೆಂಬ ರೆಡ್ಡಿ ಆರೋಪ ಸತ್ಯಕ್ಕೆ ದೂರವಾದದ್ದು ಎಂದರು. ರೆಡ್ಡಿ ಸಹೋದರರು ನಡೆಸುತ್ತಿರುವ ಅಕ್ರಮ ಗಣಿಗಾರಿಕೆ ಜಗಜ್ಜಾಹೀರಾದ ಸಂಗತಿ ಎಂದು ತಿರುಗೇಟು ನೀಡಿದರು.
ಗಣಿಗಾರಿಕೆ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದ ಸಂತಸ ಪಡುವ ವಿಚಾರವೇನೂ ಇಲ್ಲ ಎಂದಿರುವ ಸಿದ್ದರಾಮಯ್ಯ, ರೆಡ್ಡಿಗಳನ್ನು ಸತ್ಯ ಹರಿಶ್ಚಂದ್ರ ಅಂತ ಕೋರ್ಟ್ ಹೇಳಿದೆಯೇ ಎಂದು ಪ್ರಶ್ನಿಸಿದರು. ಆದರೂ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಜನಾರ್ದನ ರೆಡ್ಡಿ ತಮ್ಮ ಮೇಲಿರುವ ಆರೋಪಗಳನ್ನು ಮುಚ್ಚಿಕೊಳ್ಳಲು ಬೇರೆಯವರ ಮೇಲೆ ಅನಗತ್ಯವಾಗಿ ಗೂಬೆ ಕೂರಿಸುತ್ತಿದ್ದಾರೆ ಎಂದು ದೂರಿದರು. ಬಲ್ಡೋಟಾ ಎಂದರೆ ಯಾರೆಂಬುದೇ ನನಗೆ ಗೊತ್ತಿಲ್ಲ. ಮೈನಿಂಗ್ ವಿಷಯದಲ್ಲಿ ಯಾವುದೇ ಸಂಬಂಧವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಲ್ಡೋಟಾ ಅಂತವರಿಂದ ಹಣ ಪಡೆಯುವ ಗತಿ ನಮಗಿನ್ನೂ ಬಂದಿಲ್ಲ. ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ರೆಡ್ಡಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.