ದಿನ ಕಳೆದಂತೆ ನಿತ್ಯಾನಂದನ ವಿರುದ್ಧ ದೇಶದ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಾಗುತ್ತಿರುವುದು ಒಂದು ರೀತಿಯ ತಲೆನೋವಾದರೆ, ಇನ್ನೊಂದೆಡೆ ಭಾಷಾ ಸಮಸ್ಯೆ ಕೂಡ ಎದುರಾಗಿದೆಯಂತೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ನಿತ್ಯಾನಂದನ ಪರ ವಾದ ಮಾಡುವುದನ್ನೇ ಕೈಬಿಡಲು ಚಂದ್ರಮೌಳಿ ನಿರ್ಧಾರಿಸಿದ್ದಾರೆಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.
ಅಲ್ಲದೇ ಚಂದ್ರಮೌಳಿ ಅವರಲ್ಲಿ ಉಂಟಾಗುತ್ತಿರುವ ಕೀಳರಿಮೆ ಕೂಡ ಇದಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ. ಹೈಕೋರ್ಟ್ ವಕೀಲರಾಗಿದ್ದ ಮೌಳಿ ಕೆಳ ನ್ಯಾಯಾಲಯದಲ್ಲಿ ವಾದ ಮಾಡಬೇಕಲ್ಲ ಎಂಬ ಕೊರಗು ಮತ್ತೊಂದೆಡೆಯಂತೆ!
ನಿತ್ಯಾನಂದನ ವಿರುದ್ಧ ಕರ್ನಾಟಕ, ಪಾಂಡಿಚೇರಿ, ತಮಿಳುನಾಡುಗಳಲ್ಲಿ ಪ್ರಕರಣ ಈಗಾಗಲೇ ದಾಖಲಾಗಿದೆ. ಹಾಗಾಗಿ ಕಾಮಿ ಸ್ವಾಮಿಯ ರಾಸಲೀಲೆ ಪುರಾಣ ಮತ್ತಷ್ಟು ಹೆಚ್ಚುತ್ತಾ ಹೋದರೆ, ಸಮಯದ ಅಭಾವ ಆಗಲಿದೆ ಎಂಬುದು ಮೌಳಿ ಅವರನ್ನು ಕಾಡುತ್ತಿದೆಯಂತೆ. ಆ ನಿಟ್ಟಿನಲ್ಲಿ ನಿತ್ಯಾನಂದ ಪರ ವಾದ ಮಂಡನೆಯನ್ನು ಮೌಳಿ ಕೈಬಿಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.